ADVERTISEMENT

16 ಪಂಚಾಯಿತಿಯಲ್ಲಿ ಜೆಡಿಎಸ್ ಪ್ರಾಬಲ್ಯ

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:22 IST
Last Updated 1 ಜನವರಿ 2021, 2:22 IST
ಪಾವಗಡದಲ್ಲಿ ಗುರುವಾರ ಜೆಡಿಎಸ್ ಪ್ರಮುಖರು ಸುದ್ದಿಗೋಷ್ಠಿ
ಪಾವಗಡದಲ್ಲಿ ಗುರುವಾರ ಜೆಡಿಎಸ್ ಪ್ರಮುಖರು ಸುದ್ದಿಗೋಷ್ಠಿ   

ಪಾವಗಡ: ತಾಲ್ಲೂಕಿನಾದ್ಯಂತ 16 ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ನಡೆದ 33 ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ 16 ಪಂಚಾಯಿತಿಗಳಲ್ಲಿ ಬಹುಮತ ಪಡೆದಿದೆ. 5 ಪಂಚಾಯಿತಿಗಳಲ್ಲಿ ಸಮಬಲ ಹೊಂದಿದೆ. ಸಮಬಲ ಪಡೆದಿರುವ 5 ಪಂಚಾಯಿತಿಗಳಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸಲಾಗುವುದು ಎಂದು ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಜಿಲ್ಲೆಯಲ್ಲಿ ತಿಪಟೂರು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಪಕ್ಷದ ಬೆಂಬಲಿತರು ಅಧಿಕಸಂಖ್ಯೆಯಲ್ಲಿ ಗೆದ್ದಿದ್ದಾರೆ. ಶಿರಾ ತಾಲ್ಲೂಕಿನಲ್ಲಿ ಬಿಜೆಪಿ ತನ್ನ ಹಿಡಿತ ಕಳೆದುಕೊಂಡಿದೆ. ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಉತ್ತಮ ಫಲಿತಾಂಶ ಪಡೆಯಲಿದೆ ಎಂದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮ್, ತಾಲ್ಲೂಕಿನ ಹನುಮಯ್ಯನ ಪಾಳ್ಯದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣ ಎಂಬುವರ ಮೇಲೆ ಪ್ರತಿಸ್ಪರ್ಧಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ. ಪರಾಜಿತರಾಗಿದ್ದ ರಾಮಕೃಷ್ಣ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಅವರ ಮನೆ ಮುಂದೆ ಪಟಾಕಿ ಸಿಡಿಸಿ ತೊಂದರೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ಹಾದಿ ಹಿಡಿಯಲಾಗುವುದು ಎಂದರು.

ಮುಖಂಡ ಮಾನಂ ವೆಂಕಟಸ್ವಾಮಿ, ವಕ್ತಾರ ಅಕ್ಕಲಪ್ಪ ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ವಸಂತ್, ಮನು, ಮುಖಂಡ ಯೂನಸ್, ಜಯರಾಮರೆಡ್ಡಿ, ಗಂಗಾಧರ ನಾಯ್ಡು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.