ಪಾವಗಡ: ರಾಜ್ಯ, ಆಂಧ್ರದ ಗಡಿ ಭಾಗದಲ್ಲಿ ಕುರುಬ ಸಮುದಾಯದ ಜನತೆ ಸಂಕಷ್ಟದಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಜನಾಂಗದ ಜನತೆ ಅಭಿವೃದ್ಧಿ ಹೊಂದಬೇಕು ಎಂದು ಬೀರಲಿಂಗೇಶ್ವರ ದೇಗುಲ ಸಮಿತಿ ಅಧ್ಯಕ್ಷ ಆರ್.ಪಿ ಸಾಂಬಸದಾಶಿವರೆಡ್ಡಿ ಹೇಳಿದರು.
ತಾಲ್ಲೂಕಿನ ರಾಯಚೆರ್ಲು ಬೀರಲಿಂಗೇಶ್ವರ ದೇಗುಲದಲ್ಲಿ ಭಾನುವಾರ ನಡೆದ ಪೂಜಾ ಕಾರ್ಯಕ್ರಮ, ಗೊರವರ ಕುಣಿತ, ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಸಂಪ್ರದಾಯ, ವಿವಿಧ ಆಚರಣೆ ಮೂಲಕ ಕುರುಬ ಸಮುದಾಯದವರು ವೈವಿಧ್ಯ ಹೊಂದಿದ್ದಾರೆ. ಗುಡಿ ಗೋಪುರಗಳ ನಿರ್ಮಾಣದ ಜೊತೆಗೆ ಗಡಿ ಭಾಗದ ಕುರುಬ ಸಮುದಾಯದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು ಮುಖ್ಯವಾಹಿನಿಗೆ ಬರಬೇಕು ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಗೊರವರ ಕುಣಿತ ನೋಡುಗರ ಕಣ್ಮನ ಸೆಳೆಯಿತು.
ರಾಜ್ಯ ಹಾಗೂ ಆಂಧ್ರದ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 21 ವಿದ್ಯಾರ್ಥಿಗಳನ್ನು, 60 ದಾನಿಗಳನ್ನು ಅಭಿನಂದಿಸಲಾಯಿತು. ರಾಜೇಖರ್ ಒಂದು ಕೆ.ಜಿ ಬೆಳ್ಳಿಯನ್ನು ದೇಗುಲಕ್ಕೆ ಸಮರ್ಪಿಸಿದರು.
ಉಪಾಧ್ಯಕ್ಷ ಕೆ.ಎಸ್ ನಾಗೇಂದ್ರ, ಸಣ್ಣಲಿಂಗನ್ನ, ಜಿ.ರಾಮಾಂಜಿನೇಯುಲು, ಎ.ಅಕ್ಕಲಪ್ಪ, ಪೋತಕುಂಟ ರಮೇಶ್, ಈಶ್ವರಯ್ಯ, ಚನ್ನಕೇಶವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.