ಪಾವಗಡ (ತುಮಕೂರು): ‘ಪಾವಗಡ ತಾಲ್ಲೂಕಿನ ಸೋಲಾರ್ ಪಾರ್ಕ್ ಪ್ರದೇಶದಲ್ಲಿ ಮತ್ತೆ ಹೆಚ್ಚುವರಿಯಾಗಿ ಎರಡು ಸಾವಿರ ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಪಾವಗಡದಲ್ಲಿ ಸೋಮವಾರ ತುಂಗಾಭದ್ರಾ ಯೋಜನೆಯಿಂದ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಸೋಲಾರ್ ಪಾರ್ಕ್‌ನಲ್ಲಿ 2,050 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ಹೊಸದಾಗಿ ಹತ್ತು ಹಳ್ಳಿಗಳಿಗೆ ವ್ಯಾಪ್ತಿಗೆ ವಿಸ್ತರಿಸಿ ಮತ್ತೆ ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಈ ಯೋಜನೆ ಸಾಕಾರಗೊಂಡರೆ ಏಷ್ಯಾದಲ್ಲೇ ಅತಿ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕವಾಗಲಿದೆ. ಇದರಿಂದ ಪಾವಗಡ ತಾಲ್ಲೂಕಿನ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ₹2,529 ಕೋಟಿ ವೆಚ್ಚದಲ್ಲಿ ಆರು ತಾಲ್ಲೂಕುಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿ ಮಾಡಲಾಗಿದೆ. ಪಾವಗಡಕ್ಕೆ 200 ಕಿ.ಮೀ ದೂರದಿಂದ ನೀರು ಹರಿಸಲಾಗಿದೆ. ಪಾವಗಡ ಸೇರಿದಂತೆ ಮೊಳಕಾಲ್ಮೂರು, ಚಳ್ಳಕೆರೆ, ಕೊಡ್ಲಿಗಿ, ಹೊಸಪೇಟೆ, ಚಿತ್ರದುರ್ಗ ತಾಲ್ಲೂಕಿನ 1,161 ಹಳ್ಳಿಗಳಿಗೆ ನೀರು ಕೊಡಲಾಗಿದೆ. ಇದರಿಂದ 17.50 ಲಕ್ಷ ಜನರಿಗೆ ಶುದ್ಧ ನೀರು ಲಭ್ಯವಾಗಲಿದೆ ಎಂದು ತಿಳಿಸಿದರು.
‘ಬರಪೀಡಿತ ಭಾಗದಲ್ಲಿರುವ ಆರು ತಾಲ್ಲೂಕಿನ ಜನರು ಫ್ಲೋರೈಡ್‌ಯುಕ್ತ ನೀರು ಕುಡಿದು ಹಲವು ರೋಗಗಳಿಗೆ ತುತ್ತಾಗುತ್ತಿದ್ದರು, ಅಂಗವಿಕಲರಾಗುತ್ತಿದ್ದರು. ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ಯೋಜನೆಗೆ ಚಾಲನೆ ನೀಡಲಾಗಿದ್ದು, ಈಗ ನಾನೇ ಉದ್ಘಾಟನೆ ಮಾಡಿದ್ದೇನೆ. ಬೃಹತ್ ನೀರಾವರಿ ಯೋಜನೆಗಳಲ್ಲಿ ಇದು ಒಂದಾಗಿದೆ’ ಎಂದರು.
ಮುಖ್ಯಾಂಶಗಳು
* ಪಾವಗಡಕ್ಕೆ 200 ಕಿ.ಮೀ ದೂರದಿಂದ ನೀರು ಪೂರೈಕೆ
* ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಆರು ತಾಲ್ಲೂಕುಗಳಿಗೆ ನೀರು
* ಒಟ್ಟು 1,161 ಗ್ರಾಮಗಳಿಗೆ ತುಂಗಭದ್ರಾ ಕುಡಿಯುವ ನೀರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.