ADVERTISEMENT

ಪಾವಗಡ: ಅಂಗನವಾಡಿಗೆ ನಿವೇಶನ ದಾನ ಮಾಡಿದ ಆಶಾ ಕಾರ್ಯಕರ್ತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 17:48 IST
Last Updated 8 ಜುಲೈ 2025, 17:48 IST
ಪಾವಗಡ ತಾಲ್ಲೂಕು ಓಬೇನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಅವರು ಸೋಮವಾರ ನಿವೇಶನದ ಇ-ಖಾತೆ ಪ್ರತಿಯನ್ನು ಸಿಡಿಪಿಒ ಡಿ.ಜಿ ಸುನಿತಾ ಅವರಿಗೆ ಹಸ್ತಾಂತರಿಸಿದರು
ಪಾವಗಡ ತಾಲ್ಲೂಕು ಓಬೇನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಅವರು ಸೋಮವಾರ ನಿವೇಶನದ ಇ-ಖಾತೆ ಪ್ರತಿಯನ್ನು ಸಿಡಿಪಿಒ ಡಿ.ಜಿ ಸುನಿತಾ ಅವರಿಗೆ ಹಸ್ತಾಂತರಿಸಿದರು   

ಪಾವಗಡ (ತುಮಕೂರು): ಅಲ್ಪ ಸಂಬಳದಲ್ಲಿಯೇ ಉಳಿಸಿ, ಕೂಡಿಟ್ಟಿದ್ದ ಹಣದಿಂದ ಖರೀದಿಸಿದ್ದ ನಿವೇಶನವನ್ನು ಓಬೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಎಂಬವರು ಅಂಗನವಾಡಿ ಕೇಂದ್ರದ ಕಟ್ಟಡ ಕಟ್ಟಲು ಉಚಿತವಾಗಿ ನೀಡಿದ್ದಾರೆ.

ಗ್ರಾಮದ ಅಂಗನವಾಡಿ ಕೇಂದ್ರ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡ ದಲ್ಲಿತ್ತು. ಕೆಲ ದಿನ ಗ್ರಾಮದ ದೇಗುಲದಲ್ಲಿ ಕಾರ್ಯನಿರ್ವಹಿಸಿತ್ತು. 2015ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ

ನೇಮಕಗೊಂಡ ದಿನದಿಂದ ಶಾಂತಮ್ಮ ಅವರನ್ನು ಇದು ಕಾಡುತ್ತಿತ್ತು.

ADVERTISEMENT

ಮನೆ ಕಟ್ಟಿಸಲು ಶಾಂತಮ್ಮ 2022ರಲ್ಲಿ ಗ್ರಾಮದಲ್ಲಿ ಎರಡು ನಿವೇಶನ ಖರೀದಿಸಿದ್ದರು. ಆ ಪೈಕಿ 1,200 ಚದರ ಅಡಿ ಅಳತೆಯ ಒಂದು ನಿವೇಶನವನ್ನು ಕೊಟ್ಟಿದ್ದಾರೆ. ಜೂನ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಸರಿಗೆ ಇ–ಖಾತೆ ಮಾಡಿಸಿಕೊಟ್ಟಿದ್ದಾರೆ. 

ನಿವೇಶನ ಇಂದು ₹3 ಲಕ್ಷ ಬಾಳುತ್ತದೆ. ನಿವೇಶನ ನೀಡುವ ಶಾಂತಮ್ಮ ಅವರ ನಿಲುವಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿಲ್ಲ. ಅಂಗನವಾಡಿ ಕೇಂದ್ರದಲ್ಲಿ 16 ಮಕ್ಕಳಿದ್ದಾರೆ. ನಾಲ್ವರು ಗರ್ಭಿಣಿಯರು, ಒಬ್ಬ ಬಾಣಂತಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಓಬೇನಹಳ್ಳಿಯ ನಿವೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ 

‘ಪುಟಾಣಿಗಳ ಭವಿಷ್ಯಕ್ಕಾಗಿ ನಿವೇಶನ ನೀಡಿದ ಬಗ್ಗೆ ತೃಪ್ತಿ ಇದೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಬೆಂಬಲ ನೀಡಿದರು. ಸರ್ಕಾರ ಶೀಘ್ರ ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸಿದರೆ ನನ್ನ ಶ್ರಮ ಸಾರ್ಥಕವಾಗಲಿದೆ’ ಎಂದು ಶಾಂತಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಸಣ್ಣ ಸಂಬಳದಲ್ಲಿ ಕೂಡಿಟ್ಟಿದ್ದ ಹಣದಲ್ಲಿ ಖರೀದಿಸಿದ್ದ ನಿವೇಶನವನ್ನು ಗ್ರಾಮದ ಅಂಗನವಾಡಿಗೆ ನೀಡಿರುವುದು ಶಾಂತಮ್ಮ ಔದಾರ್ಯಕ್ಕೆ ಸಾಕ್ಷಿ ಎಂದು ಓಬೇನಹಳ್ಳಿಯ ರಾಘವೇಂದ್ರ ‌ಹೇಳಿದರು. ಶಾಂತಮ್ಮ ಅವರ ಈ ನಡೆ ಸಮುದಾಯ ಪ್ರಜ್ಞೆಯ ಪ್ರತೀಕ ಎಂದು ಎಸ್.ವಿಜಯಕುಮಾರ್ ಅವರು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.