ADVERTISEMENT

ಪಾಯಬಿಟ್ಟು ಮೇಲೇಳದ ಮನೆಗಳು; 27 ಸಾವಿರ ಮನೆಗಳ ನಿರ್ಮಾಣ ಬಾಕಿ

ದಶಕದಲ್ಲಿ 1.44 ಲಕ್ಷ ಮನೆ ನಿರ್ಮಾಣಕ್ಕೆ ಮಂಜೂರಾತಿ

ಕೆ.ಜೆ.ಮರಿಯಪ್ಪ
Published 26 ನವೆಂಬರ್ 2020, 4:46 IST
Last Updated 26 ನವೆಂಬರ್ 2020, 4:46 IST
ಕುಣಿಗಲ್ ತಾಲ್ಲೂಕು ಬಾಗೇನಹಳ್ಳಿ ಬಳಿ ಮನೆ ನಿರ್ಮಾಣ
ಕುಣಿಗಲ್ ತಾಲ್ಲೂಕು ಬಾಗೇನಹಳ್ಳಿ ಬಳಿ ಮನೆ ನಿರ್ಮಾಣ   

ತುಮಕೂರು: ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದ್ದು, ಸಾಕಷ್ಟು ಕಟ್ಟಡಗಳು ಪಾಯದ ಹಂತದಿಂದ ಮೇಲೇಳುತ್ತಿಲ್ಲ. ದಶಕದ ಹಿಂದೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ 2010– 2020ರ ವರೆಗೆ ಒಟ್ಟು 1.44 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಇನ್ನೂ 27,545 ಮನೆಗಳ ನಿರ್ಮಾಣ ಕಾರ್ಯವೂ ಆರಂಭವಾಗಿಲ್ಲ. ಪ್ರತಿ ವರ್ಷವೂ ಹೊಸದಾಗಿ ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸುತ್ತಿದ್ದು, ಈ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವರು ಇನ್ನೂ ಮನೆ ಸಿಕ್ಕಿಲ್ಲ ಎಂದು ದೂರುವುದು ಮಾತ್ರ ತಪ್ಪಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿಗೆ ಅರ್ಜಿ ಹಿಡಿದು ಸುತ್ತಾಟ ನಡೆಸುವುದು ನಿಂತಿಲ್ಲ. ಗ್ರಾಮಸಭೆಗಳಲ್ಲಿ ಮನೆಗಳಿಗೆ ಬೇಡಿಕೆ ಸಲ್ಲಿಸುವುದೂ ಮುಂದುವರಿದಿದೆ.

ADVERTISEMENT

ಸಮಸ್ಯೆ ಎಲ್ಲಿ?: ವಿವಿಧ ವಸತಿ ಯೋಜನೆಗಳಲ್ಲಿ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಧನ ನೀಡಲಾಗುತ್ತದೆ. ಬಸವ ವಸತಿ ಯೋಜನೆಯಲ್ಲಿ ಹೆಚ್ಚು ಸಮಸ್ಯೆ ಕಾಣಿಸಿಕೊಂಡಿದೆ. 2010–2011ರಿಂದ 2017–2018ರ ವರೆಗೆ 88,098 ಮನೆಗಳನ್ನು ಮಂಜೂರು ಮಾಡಿದ್ದು, 72,309 ಮನೆಗಳನ್ನು ನಿರ್ಮಿಸಲಾಗಿದೆ. 2018ರ ನಂತರ ಈ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡಿಲ್ಲ. ಬಾಕಿ ಉಳಿದಿರುವ ಕೆಲಸ ಪೂರ್ಣಗೊಂಡಿಲ್ಲ.

ಈ ಯೋಜನೆಯಲ್ಲಿ ಆರಂಭದಲ್ಲಿ ಪ್ರತಿ ಮನೆ ನಿರ್ಮಾಣಕ್ಕೆ ₹50 ಸಾವಿರ ಆರ್ಥಿಕ ನೆರವು ನೀಡಲಾಗುತಿತ್ತು. ಹಲವರು ಮನೆ ನಿರ್ಮಾಣಕ್ಕೆ ಪಾಯದ ಹಂತದವರೆಗೆ ನಿರ್ಮಾಣವನ್ನೂ ಆರಂಭಿಸಿದರು. ನಂತರದ ದಿನಗಳಲ್ಲಿ ನೆರವಿನ ಮೊತ್ತವನ್ನು ಸರ್ಕಾರ ಸಾಮಾನ್ಯ ವರ್ಗದವರಿಗೆ ₹1.20 ಲಕ್ಷ, ಪರಿಶಿಷ್ಟರಿಗೆ ₹1.50 ಲಕ್ಷಕ್ಕೆ ಹೆಚ್ಚಳ ಮಾಡಿತು. ಹೊಸದಾಗಿ ಮನೆ ನಿರ್ಮಿಸುವವರಿಗೆ ಈ ಹೆಚ್ಚಳದಿಂದ ಅನುಕೂಲವಾಯಿತು. ಈ ಹಿಂದೆ ಫಲಾನುಭವಿಯಾಗಿ ಆಯ್ಕೆಯಾಗಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡವರಿಗೆ ಹೆಚ್ಚಳಮಾಡಿದ ಸಹಾಯ ಧನದ ನೆರವು ಸಿಗಲಿಲ್ಲ.

‘ಹೊಸದಾಗಿ ಮನೆ ಕಟ್ಟುವವರಿಗೆ ಹೆಚ್ಚಿನ ನೆರವು ಸಿಗುತ್ತಿದೆ. ನಮಗೆ ಕಡಿಮೆ ಹಣ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಸಾಕಷ್ಟು ಜನರು ಪಾಯದ ಹಂತದವರೆಗೆ ನಿರ್ಮಿಸಿ, ನಂತರ ನಿರ್ಮಾಣ ಮುಂದುವರಿಸಿಲ್ಲ. ಹಾಗಾಗಿ ಹಿನ್ನಡೆ ಅನುಭವಿಸಬೇಕಾಯಿತು’ ಎಂದು ವಸತಿ ಇಲಾಖೆ ಮೂಲಗಳು ತಿಳಿಸಿವೆ.

ಫಲಾನುಭವಿಗಳನ್ನು ಆಯ್ಕೆಮಾಡಿ ಮಂಜೂರಾತಿ ಪತ್ರ ನೀಡಿದ್ದು, ಅವರು ಮನೆ ನಿರ್ಮಾಣ ಕೆಲಸ ಆರಂಭಿಸಿದ್ದರೂ ಪೂರ್ಣಗೊಳಿಸಿಲ್ಲ. ಹೊಸದಾಗಿ ಫಲಾನುಭವಿಗಳನ್ನೂ ಆಯ್ಕೆ ಮಾಡಲಾಗುತ್ತಿಲ್ಲ. ಇಂತಹ ಪರಿಸ್ಥಿತಿಯಿಂದಾಗಿ ಮನೆಗಳ ನಿರ್ಮಾಣ ಕುಂಠಿತಗೊಂಡಿದೆ. ಜತೆಗೆ ಯಾವುದಾದರೊಂದು ನಿವೇಶನ ಅಥವಾ ಜಾಗ ತೋರಿಸಿ ಮನೆ ಮಂಜೂರು ಮಾಡಿಸಿಕೊಂಡಿರುತ್ತಾರೆ. ನಂತರ ನಿವೇಶನ ವಿವಾದಕ್ಕೆ ಸಿಲುಕಿ ಮನೆ ನಿರ್ಮಿಸುವುದಿಲ್ಲ. ಮಂಜೂರಾದ ಮನೆಗಳನ್ನು ಬೇರೆಯವರಿಗೆ ವರ್ಗಾವಣೆ ಮಾಡಲೂ ಆಗುತ್ತಿಲ್ಲ. ನಿವೇಶನ ಸಮಸ್ಯೆಯೂ ಹಿನ್ನಡೆಗೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.