ADVERTISEMENT

ವೈದ್ಯರ ಮುಷ್ಕರ | ಸರ್ಕಾರಿ ಆಸ್ಪತ್ರೆಗಳಲ್ಲಿ ತುಂಬಿ ತುಳುಕಿದ ಜನ

ಖಾಸಗಿ ಆಸ್ಪತ್ರೆ ವೈದ್ಯರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 16:06 IST
Last Updated 17 ಜೂನ್ 2019, 16:06 IST
ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಪಡೆಯಲು ಬಂದ ಜನರು, ಅವರ ಸಂಬಂಧಿಕರು ನೋಂದಣಿ ಚೀಟಿ ಪಡೆಯಲು ಸಾಲುಗಟ್ಟಿ ನಿಂತಿದ್ದ ನೋಟ
ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಪಡೆಯಲು ಬಂದ ಜನರು, ಅವರ ಸಂಬಂಧಿಕರು ನೋಂದಣಿ ಚೀಟಿ ಪಡೆಯಲು ಸಾಲುಗಟ್ಟಿ ನಿಂತಿದ್ದ ನೋಟ   

ತುಮಕೂರು: ಪಶ್ಚಿಮ ಬಂಗಾಳದ ಎನ್.ಆರ್.ಎಸ್. ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ವೈದ್ಯರು ಮತ್ತು ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಸೋಮವಾರ ದೇಶದಾದ್ಯಂತ ಕರೆಕೊಟ್ಟಿದ್ದ ವೈದ್ಯರ ಪ್ರತಿಭಟನೆಗೆ ನಗರದಲ್ಲಿಯೂ ಉತ್ತಮ ಸ್ಪಂದನೆ ದೊರೆಯಿತು.

ಖಾಸಗಿ ಆಸ್ಪತ್ರೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕಿದರು.

ಬೆಳಿಗ್ಗೆಯಿಂದ ರಾತ್ರಿಯವರೆಗೂ ರೋಗಿಗಳು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಚಿಕಿತ್ಸೆಗೆ ಬರುವವರಿಗೆ ಚೀಟಿ ಕೊಡುವ ನಿರ್ಬಂಧಿತ ಅವಧಿ ಸಡಿಲಗೊಳಿಸಲಾಗಿತ್ತು. ವೈದ್ಯರು ಸತತವಾಗಿ ಚಿಕಿತ್ಸೆಗೆ ಬಂದವರ ಆರೋಗ್ಯ ತಪಾಸಣೆಯಲ್ಲಿ ನಿರತರಾದರು.

ADVERTISEMENT

ಆಂಬುಲೆನ್ಸ್‌ಗಳು ನಿರಂತರವಾಗಿ ಕಾರ್ಯನಿರತವಾಗಿದ್ದವು. ತುರ್ತು ಚಿಕತ್ಸೆ ಅಗತ್ಯವಿದ್ದವರನ್ನು ಜಿಲ್ಲೆಯ ಹೋಬಳಿ, ತಾಲ್ಲೂಕು ಕೇಂದ್ರಗಳಿಂದ ಆಂಬುಲೆನ್ಸ್‌ಗಳು ಜಿಲ್ಲಾ ಆಸ್ಪತ್ರೆಗೆ ಕರೆತಂದವು. ಆಸ್ಪತ್ರೆಯ ಯಾವುದೇ ವಿಭಾಗಕ್ಕೂ ಹೋದರೂ ಜನ ಸಾಲುಗಟ್ಟಿ ನಿಂತಿದ್ದರು.

ಜಿಲ್ಲಾ ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಗರಿಷ್ಠ 700 ಜನ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಬರುತ್ತಿದ್ದರು. ಆದರೆ, ಸೋಮವಾರ ಸಂಜೆ ವೇಳೆಗೆ 1,200 ಜನರು ಚಿಕಿತ್ಸೆ ಪಡೆದರು. ತಡ ರಾತ್ರಿಯವರೆಗೂ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಮುಂದುವರಿದಿತ್ತು.

ಭಾರತೀಯ ವೈದ್ಯಕೀಯ ಸಂಘದ ಮುಷ್ಕರ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕ ನೇತೃತ್ವದಲ್ಲಿ ವೈದ್ಯರು ಮುಷ್ಕರ ನಡೆಸಿದರು.

ಐಎಂಎ ಕಚೇರಿ ಮುಂಭಾಗ ಹಾಗೂ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಘೋಷಣೆ ಕೂಗಿದರು.

ನಗರ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಆಸ್ಪತ್ರೆಗಳ ಬಾಗಿಲು ಮುಚ್ಚಲಾಗಿತ್ತು. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿತು.

ವೈದ್ಯ ವೃತ್ತಿಗೆ ಹಿಂದೇಟು: ಪ್ರತಿಭಟನೆ ವೇಳೆ ಮಾತನಾಡಿದ ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ್, ‘ ವೈದ್ಯರ ಮೇಲೆ ಹಲ್ಲೆ ನಡೆಸುವುದರಿಂದ ಇತರೆ ರೋಗಿಗಳ ಚಿಕಿತ್ಸೆಗೂ ತೊಂದರೆಯಾಗುತ್ತದೆ. ಒಂದು ವೇಳೆ ವೈದ್ಯರು ತಪ್ಪು ಮಾಡಿದರೆ ಆ ಬಗ್ಗೆ ಹಿರಿಯ ವೈದ್ಯರ ಸಮ್ಮುಖದಲ್ಲಿ ಮಾತುಕತೆ ನಡೆಸಲಿ’ ಎಂದು ಹೇಳಿದರು.

ಏಕಾಏಕಿ ಹಲ್ಲೆ ನಡೆಸುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಇದರಿಂದ ಮುಂದಿನ ಪೀಳಿಗೆಯ ಯುವಕರು ವೈದ್ಯ ವೃತ್ತಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಜಿ.ಪರಮೇಶ್ವರಪ್ಪ, ವೈದ್ಯರ ಮೇಲೆ ಹಲ್ಲೆ ನಡೆಸುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

‘ಪಶ್ಚಿಮ ಬಂಗಾಳದ ಸರ್ಕಾರದಿಂದ ಯಾವುದೇ ರೀತಿಯ ಸ್ಪಷ್ಟ ಕ್ರಮ ಆಗಿಲ್ಲ. ವೈದ್ಯರ ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ’ ಎಂದು ದೂರಿದರು.

ಐಎಂಎ ಜಿಲ್ಲಾ ಘಟಕದ ಪದಾಧಿಕಾರಿಗಳು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.