ADVERTISEMENT

ವಾಲ್ಮೀಕಿ ಸಮುದಾಯದ ಶಕ್ತಿ ಪ್ರದರ್ಶನ ಮಾಡಿ

ಮೀಸಲಾತಿಗೆ ಜೂನ್ 9ರಿಂದ ಪಾದಯಾತ್ರೆ ಕುರಿತ ಪೂರ್ವ ಭಾವಿ ಸಭೆಯಲ್ಲಿ ಕೆ.ಎನ್.ರಾಜಣ್ಣ ವಾಲ್ಮೀಕಿ ನಾಯಕ ಸಮುದಾಯಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 13:03 IST
Last Updated 27 ಮೇ 2019, 13:03 IST
ಸಭೆಯಲ್ಲಿ ಕೆ.ಎನ್.ರಾಜಣ್ಣ ಮಾತನಾಡಿದರು. ಹರಿಹರದ ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಸಮಾಜದ ಮುಖಂಡರಿದ್ದರು
ಸಭೆಯಲ್ಲಿ ಕೆ.ಎನ್.ರಾಜಣ್ಣ ಮಾತನಾಡಿದರು. ಹರಿಹರದ ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಸಮಾಜದ ಮುಖಂಡರಿದ್ದರು   

ತುಮಕೂರು: ‘ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ನೀಡಿರುವ ಶೇ 7.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರವು ಜಾರಿಗೊಳಿಸಲು ಒತ್ತಾಯಿಸಿ ವಾಲ್ಮೀಕಿ ಸಮಾಜದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಯಶಸ್ವಿಯಾಗಬೇಕು. ವಾಲ್ಮೀಕಿ ಸಮುದಾಯದ ಶಕ್ತಿ ಈ ವಿಷಯದಲ್ಲಿ ಪ್ರದರ್ಶನವಾಗಬೇಕಿದೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮನವಿ ಮಾಡಿದರು.

ನಗರದ ಹೊರಪೇಟೆಯ ವಾಲ್ಮೀಕಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

1978ರಿಂದಲೇ ಮೀಸಲಾತಿಗೆ ಹೋರಾಟ ಮಾಡಿಕೊಂಡು ಬರಲಾಗಿದೆ. ನಮ್ಮ ಸಮುದಾಯದ ನಾಯಕರ ಓಲೈಕೆ ರಾಜಕಾರಣದಿಂದ ಉದ್ಯೋಗ ನೇಮಕಾತಿಯಲ್ಲಿ ರಾಜ್ಯ ಸರ್ಕಾರವು ಇದುವರೆಗೂ 7.5 ಮೀಸಲಾತಿ ಜಾರಿಗೆ ತಂದಿಲ್ಲ’ ಎಂದು ಹೇಳಿದರು.

ADVERTISEMENT

ಪ್ರಸನ್ನಾನಂದಪುರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮಹತ್ವದ್ದಾಗಿದ್ದು, ಈ ಹೋರಾಟದ ಮೂಲಕ ಫಲಿತಾಂಶ ಕಂಡುಕೊಳ್ಳಬೇಕಾಗಿದೆ' ಎಂದು ಹೇಳಿದರು.

ಮೈತ್ರಿ ಸರ್ಕಾರವು ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಬಿದ್ದು ಹೋಗಬಹುದು. ಸರ್ಕಾರ ಬಿದ್ದು ಹೋದರೆ ಜೂನ್ 9ರಂದು ಹಮ್ಮಿಕೊಂಡಿರುವ ಹೋರಾಟ ಮುಂದೂಡಬಹುದು. ಆದರೆ, ರದ್ದುಪಡಿಸುವುದು ಬೇಡ’ ಎಂದು ಹೇಳಿದರು.

ಹರಿಹರದ ರಾಜನಹಳ್ಳಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ‘ಇದೊಂದು ಐತಿಹಾಸಿಕ ಹೋರಾಟವಾಗಿದೆ. ಜೂನ್ 9 ರಂದು ಆರಂಭವಾಗುವ ಪಾದಯಾತ್ರೆ ದಾವಣೆಗೆರೆ, ಚಿತ್ರದುರ್ಗ,ತುಮಕೂರು, ಚಿಕ್ಕಬಳ್ಳಾಪುರದ ಮೂಲಕ ಜೂನ್ 24ಕ್ಕೆ ಬೆಂಗಳೂರು ತಲುಪಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ, ರಾಮಾಂಜೀನಪ್ಪ, ಪಾಲಿಕೆ ಸದಸ್ಯ ಟಿ.ಜಿ.ಕೃಷ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಲಕ್ಷ್ಮಿನಾರಾಯಣ, ಆರ್. ರಾಜೇಂದ್ರ, ರಾಜೇಂದ್ರ ನಾಯಕ್, ಟಿ.ಬಿ.ಮಲ್ಲೇಶ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.