ADVERTISEMENT

ಪೋಕ್ಸೋ ಪ್ರಕರಣ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:57 IST
Last Updated 23 ಜನವರಿ 2020, 15:57 IST

ತುಮಕೂರು: ತುರುವೇಕೆರೆ ತಾಲ್ಲೂಕು ಹನುಮಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತು ಆದ ಹಿನ್ನೆಲೆಯಲ್ಲಿ ಆರೋಪಿ ರಂಗಪ್ಪ(38)ಗೆ ನ್ಯಾಯಾಲಯ 5 ವರ್ಷ ಜೈಲು ವಾಸ, ₹25 ಸಾವಿರ ವಿಧಿಸಿದೆ.

ತುರುವೇಕೆರೆ ತಾಲ್ಲೂಕು ಹನುಮಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿಯ ಮೇಲೆ ಹನುಮಾಪುರ ಗ್ರಾಮದ ರಂಗಪ್ಪ 2016ರ ನ.17 ರಂದು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರುಕ್ಮಿಣಿ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.

ತನಿಖೆ ಕೈಗೊಂಡ ತುರುವೇಕೆರೆ ವೃತ್ತ ನಿರೀಕ್ಷಕ ರಾಮಚಂದ್ರ ಅವರು ಆರೋಪಿಯಾದ ರಂಗಪ್ಪನನ್ನು ದಸ್ತಗಿರಿ ಮಾಡಿ, ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ತಯಾರಿಸಿ, ತುಮಕೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಾರ್ವಜನಿಕ ಅಭಿಯೋಜಕರಾದ ಕೆ.ವಿ ಶ್ರೀನಿವಾಸ ನಾಯ್ಡು ವಾದ ಮಂಡಿಸಿದ್ದರು.

ADVERTISEMENT

ಕೊಲೆ ಆರೋಪಿಯ ಬಂಧನ

ತುಮಕೂರು: ಸಿರಾ ತಾಲ್ಲೂಕು ದಾವೂದ್ ಪಾಳ್ಯದ ನಿವಾಸಿ ನಜೀರ್ ಎಂಬಾತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ದುಷ್ಕರ್ಮಿಯನ್ನು ಬಂಧಿಸುವಲ್ಲಿ ತುಮಕೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ದುಷ್ಕರ್ಮಿಯು ಜ.19 ರಂದು ರಾತ್ರಿ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಸೀಬಿ ನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಇರುವ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ನಜೀರ್‌ನನ್ನು ಕೊಲೆಗೈದಿದ್ದ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಪತ್ತೆ ಮಾಡಲು ತುಮಕೂರು ಗ್ರಾಮಾಂತರ ವೃತ್ತದ ಸಿಪಿಐ ರಾಮಕೃಷ್ಣಯ್ಯ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸದರಿ ತಂಡವು ಆರೋಪಿಯಾದ ಸಿರಾ ತಾಲ್ಲೂಕು, ಕಳ್ಳಂಬೆಳ್ಳ ಹೋಬಳಿ, ದೊಡ್ಡ ಆಲದಮರದ ನಿವಾಸಿ ಆರ್.ಮನೋಹರನನ್ನು ಬಂಧಿಸಿದೆ.

ಕೊಲೆಗೆ ಕಾರಣ: ನಜೀರ್ ಮತ್ತು ಮನೋಹರ್ ಸ್ನೇಹಿತರಾಗಿದ್ದು, ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಜ.19 ರಂದು ರಾತ್ರಿ ತನಗೆ ಸರಿಯಾಗಿ ಕೂಲಿ ಹಣ ಕೊಡುತ್ತಿಲ್ಲ ಎಂದು ಮನೋಹರ ವಿರುದ್ಧ ನಜೀರ್ ಗಲಾಟೆ ಮಾಡಿದ್ದಾನೆ. ಗಲಾಟೆ ಸಂದರ್ಭದಲ್ಲಿ ನಜೀರ್‌, ಮನೋಹರ್‌ ಕುಟಂಬದವರ ಬಗ್ಗೆ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಕೋಪಗೊಂಡು ಮನೋಹರ್ ಕಲ್ಲು ಎತ್ತಿ ಹಾಕಿ ನಜೀರ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.