ತುಮಕೂರು: ‘ಇದ್ದಾಗ ಬರಲಿಲ್ಲ ಮನೆಯ ಕಡೆಗೆ, ಈಗ ಬಂದಿರಿ ಮಸಣಕ್ಕೆ. ಬನ್ನಿ ಕುಳಿತುಕೊಳ್ಳಿ ಎನ್ನಲು ಇದು ಮನೆಯಲ್ಲ ನೋಡಿ. ಈಗಿಲ್ಲಿ ಅತ್ತೇನು, ಮತ್ತೆ ಬರುವೇನ ನಾನು?’ ಎಂದು ಪ್ರಶ್ನಿಸುವ ಮೂಲಕ ಕವಿ ರಮೇಶ್ ಕುಮಾರ್ ಮುದಿಗೆರೆ ಪ್ರಸ್ತುತ ಸಮಾಜದಲ್ಲಿನ ಸಂಬಂಧಗಳ ಕುರಿತು ತಮ್ಮ ಕವಿತೆಯಲ್ಲಿ ತೆರೆದಿಟ್ಟರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕವಿಗೋಷ್ಠಿಯಲ್ಲಿ ಅವರು ವಾಚಿಸಿದ ‘ಆತ್ಮದ ಹಾಡು’ ನೆರೆದವರ ಕಣ್ತೆರೆಸಿತು.
‘ಇದ್ದಾಗ ಮರೆತವರು ನೀವು, ಸತ್ತಾಗ ಯಾಕಿಷ್ಟು ನೋವು. ಕಟ್ಟುಪಾಡುಗಳ ಹೊರೆಯ ಕಟ್ಟಿ ಹೊರಿಸಿದಿರಿ, ಕೆಳಗೆ ಬಿದ್ದರೂ ಬಿಡದೆ ಚಾಟಿ ಬೀಸಿದಿರಿ. ಅರ್ಥೈಸಿಕೊಳ್ಳಲಿಲ್ಲ ನನ್ನ ಬಹಳ ಜನ, ಅರ್ಥವಾದವರಿಗೆ ನನ್ನ ಕೊನೆಯ ನಮನ. ಮುಗಿಸಿಬಿಡಿ ಸಾಕಿನ್ನು ಶವದ ಸಿಂಗಾರವ, ಹೆಣ ಎನ್ನುವುದೇ ನಿಮ್ಮ ಸಭೆಯ ಸಂತಾಪವ? ಎಂದೂ ಪ್ರಶ್ನಿಸಿದರು.
ಕವಿ ಉಮೇಶ್ ಎನ್.ಯಲಚಿಗೆರೆ, ‘ಧರ್ಮ ಧರ್ಮಾಂಧರ ಕೈಗೆ ಸಿಗುವ ಮುನ್ನ, ಜಾತ್ಯತೀತ ಜಾತಿಯ ಕೈವಶ ಆಗುವ ಮುನ್ನ ಸಾಮರಸ್ಯ ಸಾರಬೇಕು ಅಣ್ಣ. ಭವ್ಯ ಭಾರತದ ಕನಸು, ನುಚ್ಚಾಗದಿರಲಿ ಬಣ್ಣ. ರಾಷ್ಟ್ರೀಯ ಭಾವೈಕ್ಯಗೆ ತೊಡಕುಬೇಡ. ರಾಜಕೀಯಕ್ಕೆ ಧರ್ಮ, ಜಾತಿ ಮುಂದೊಡ್ಡಬೇಡ. ರಾಷ್ಟ್ರದ ಅಭಿವೃದ್ಧಿಗೆ ಇರಲಿ ಜಪ, ತಪ. ಅಧಿಕಾರದ ವ್ಯಾಮೋಹಕ್ಕೆ ಛಿದ್ರವಾಗದಿರಲಿ ಮನಸ್ತಾಪ’ ಎಂದು ನೆರೆದಿದ್ದವರನ್ನು ಎಚ್ಚರಿಸಿದರು.
ಮಹದೇವಯ್ಯ ಚಿಕ್ಕನಾರವಂಗಲ, ‘ಕನ್ನಡ ವಿಶ್ವ ಭಾಷೆಯಾಗಿದೆ, ಕನ್ನಡಿಗರು ವಿಶ್ವದೆಲ್ಲೆಡೆ ಹರಡಿದ್ದಾರೆ. ಹೆಮ್ಮೆ ಪಡಬೇಕಾದ ಕನ್ನಡಿಗರಲ್ಲಿ ಜಡತ್ವ ಮನೆ ಮಾಡಿದೆ. ಸುವರ್ಣ ಕರ್ನಾಟಕದ ಹಬ್ಬಕ್ಕೆ ನಿರುತ್ಸಾಹ ಆವರಿಸುತ್ತಿದೆ. ನಾಡಿನ ಕಲೆ, ಸಂಸ್ಕೃತಿ ನಶಿಸುತ್ತಿದೆ. ಸೆಟೆದು ನಿಲ್ಲದಿರೆ ನುಡಿಯೊಡನೆ ನಶಿಸುವಿರಿ, ಕೊಚ್ಚಿ ಹೋಗುವಿರಿ ಪರಭಾಷಿಕರ ಹೊಳೆಯಲ್ಲಿ, ಏದ್ದೇಳಿ, ಎಚ್ಚರಗೊಳ್ಳಿ’ ಎಂದು ಕರೆ ನೀಡಿದರು.
ಕವಿಗಳಾದ ಮಂಜುನಾಥ ಜೋಗಿ, ಶಿವಲಿಂಗಮೂರ್ತಿ, ಮಂಜುನಾಥ ಬುಡಸನಹಳ್ಳಿ, ಎ.ಸಿ.ರಂಗರಾಜು, ಮೇ.ಘ.ಗಂಗಾಧರನಾಯ್ಕ್, ಚಿಕ್ಕಪ್ಪಯ್ಯ, ಮಧು ಬೈಚೇನಹಳ್ಳಿ, ಎಸ್.ಆರ್.ನಾಗರಾಜು, ಪಿ.ಪ್ರಸಾದ್, ಎಂ.ಎಸ್.ಸುಶೀಲಾ, ರವೀಶ್ ಕೊಟ್ಟಿಗೇನಹಳ್ಳಿ, ಎಸ್.ಆರ್.ವೆಂಕಟೇಶ್, ರಾಜೇಶ್ ಗುಬ್ಬಿ, ಟಿ.ಕೆ.ವಂದನಾ, ಗೌಡಿಹಳ್ಳಿ ಲೋಕೇಶ್, ಪಾಲಸಂದ್ರ ಹನುಮಂತರಾಯಪ್ಪ, ನಂ.ಕವಿತಾ, ಮಹಾಲಕ್ಷ್ಮಿ ಹೊಸಕೆರೆ, ನವೀನ್ ಹಳೆಮನೆ, ನರಸಿಂಹಮೂರ್ತಿ ಹೂವಿನಹಳ್ಳಿ, ಶಾಂತಕುಮಾರ್ ಐ.ಡಿ.ಹಳ್ಳಿ ಕವನ ವಾಚಿಸಿದರು.
ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ, ಡಿಡಿಪಿಯು ಬಾಲಗುರುಮೂರ್ತಿ, ಪ್ರಾಧ್ಯಾಪಕ ಸತ್ಯಮಂಗಲ ಮಹದೇವ, ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಅನುಸೂಯ, ಉಗಮ ಶ್ರೀನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.