ADVERTISEMENT

ತುಮಕೂರು: ಗಮನ ಸೆಳೆದ ಪಥಸಂಚಲನ

ಸ್ನಾತಕೋತ್ತರ ಪದವಿ ಪಡೆದವರು 28 ಮಂದಿ ಪೊಲೀಸ್‌ ಇಲಾಖೆಗೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 15:55 IST
Last Updated 31 ಜನವರಿ 2023, 15:55 IST
ತುಮಕೂರಿನಲ್ಲಿ ಮಂಗಳವಾರ ನಡೆದ ನಾಗರಿಕ ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಗಮನ ಸೆಳೆಯಿತು
ತುಮಕೂರಿನಲ್ಲಿ ಮಂಗಳವಾರ ನಡೆದ ನಾಗರಿಕ ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಗಮನ ಸೆಳೆಯಿತು   

ತುಮಕೂರು: ನಾಗರಿಕ ಮಹಿಳಾ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ನಡೆಯಿತು.

ರಾಜ್ಯದ 7 ಜಿಲ್ಲೆಗಳ 104 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದು, ಕರ್ತವ್ಯಕ್ಕೆ ತೆರಳಿದರು. ಇದರಲ್ಲಿ 64 ಜನ ಪದವೀಧರರಾಗಿದ್ದು, 28 ಮಂದಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 11 ಜನ ಎಂಜಿನಿಯರಿಂಗ್ ಪದವಿ ಮುಗಿಸಿದವರು ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾರೆ.

ತರಬೇತಿ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳ ಕುರಿತು ತಿಳಿಸಲಾಗಿದೆ. ಕಾಯ್ದೆಗಳು, ನ್ಯಾಯಾಲಯದ ಕರ್ತವ್ಯ, ವಿಧಿವಿಜ್ಞಾನ, ಪ್ರಥಮ ಚಿಕಿತ್ಸೆ, ಶವ ಪರೀಕ್ಷೆ, ಕರಾಟೆ, ಯೋಗಾಸನ, ಈಜು ಒಳಗೊಂಡಂತೆ ವಿವಿಧ ವಿಷಯಗಳ ಬಗ್ಗೆ ಎಂಟು ತಿಂಗಳು ಕಾಲ ತರಬೇತಿ ನೀಡಲಾಗಿದೆ.

ADVERTISEMENT

12ನೇ ತಂಡದ ಸರ್ವೋತ್ತಮ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಯ ಕನಕೂರು ಗ್ರಾಮದ ಅಶ್ವಿನಿ ಪವಾರ್‌ ಪಡೆದುಕೊಂಡರು. ತರಬೇತಿ ಅವಧಿಯಲ್ಲಿ ಹೊರಾಂಗಣ, ಒಳಾಂಗಣ, ಫೈರಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಬಹುಮಾನ ವಿತರಿಸಿ ಮಾತನಾಡಿ, ‘ಕರ್ತವ್ಯದ ಸಮಯದಲ್ಲಿ ಎದುರಾಗುವ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಪೊಲೀಸ್‌ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಕೆ.ಶಹಪೂರವಾಡ್‌, ‘ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶವಿದೆ. ಠಾಣೆಗಳು ದೇವಾಲಯ, ಚರ್ಚ್, ಮಸೀದಿಯಂತೆ ಪವಿತ್ರವಾದ ಜಾಗ’ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಮರಿಯಪ್ಪ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಗೋಯೆಲ್, ಡಿವೈಎಸ್‌ಪಿಗಳಾದ ಶ್ರೀನಿವಾಸ್, ಪರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.