ADVERTISEMENT

ಜಿಲ್ಲೆಯಲ್ಲಿ ರಾಜಕೀಯ ವಲಸೆಯ ಸದ್ದು

ಮತ್ತೊಮ್ಮೆ ಆಪರೇಷನ್ ಕಮಲ ನಡೆದರೆ ಜೆಡಿಎಸ್ ಶಾಸಕರತ್ತ ಬಿಜೆಪಿ ಪಾಳಯದ ನೋಟ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 7:34 IST
Last Updated 7 ಸೆಪ್ಟೆಂಬರ್ 2019, 7:34 IST

ತುಮಕೂರು: ಜಿಲ್ಲೆಯ ಶಾಸಕರಲ್ಲಿ ‘ರಾಜಕೀಯ ವಲಸೆ’ ಆರಂಭವಾಗುತ್ತದೆ. ಕೆಲ ಜೆಡಿಎಸ್ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಆಪರೇಷನ್ ಕಮಲಕ್ಕೆ ಒಳಗಾಗುವರು ಎನ್ನುವ ಗುಸುಗುಸು ಸುದ್ದಿ ಜಿಲ್ಲಾ ರಾಜಕಾರಣದ ಒಳಸುಳಿಯಲ್ಲಿ ಹರಿಡಾಡುತ್ತಿದೆ.

ಸರ್ಕಾರ ಸುಭದ್ರಗೊಳಿಸಲು ಬಿಜೆಪಿ ಮತ್ತೊಂದು ಸುತ್ತಿನ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಲಿದೆ ಎನ್ನುವ ಸದ್ದು ರಾಜ್ಯ ಮಟ್ಟದಲ್ಲಿ ಜೋರಾಗಿಯೇ ಇದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಮೊದಲ ಬಾರಿ ಪ್ರಯತ್ನ ಮಾಡಿದಾಗ ಶಿರಾ ಶಾಸಕ ಬಿ.ಸತ್ಯನಾರಾಯಣ ಕಮಲದ ತೆಕ್ಕೆ ಸೇರುವರು ಎನ್ನುವ ಸುದ್ದಿ ಹರಡಿತ್ತು. ಆದರೆ ಸತ್ಯನಾರಾಯಣ್ ಆಪರೇಷನ್ ಕಮಲವನ್ನು ಸ್ಪಷ್ಟವಾಗಿ ನಿರಾಕರಿಸಿದರು.

ADVERTISEMENT

ಆ ನಂತರದ ಸರದಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರದ್ದು. ಶ್ರೀನಿವಾಸ್ ಅವರು ಸಚಿವರಾಗಿದ್ದಾಗಲೂ ಆಪರೇಷನ್ ವದಂತಿ ಹಬ್ಬಿತ್ತು. ಈ ಇಬ್ಬರೂ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.

ಇತ್ತೀಚೆಗೆ ಜೆಡಿಎಸ್‌ನ ನಾಲ್ಕೈದು ಮಂದಿ ವಿಧಾನಪರಿಷತ್ ಸದಸ್ಯರು, ಶಾಸಕರು ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದರು. ಈ ತಂಡದಲ್ಲಿ ಜಿಲ್ಲೆ ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಇದ್ದರು.

ಈ ಪ್ರವಾಸ ರಾಜ್ಯಮಟ್ಟದಲ್ಲಿ ಒಂದಿಷ್ಟು ಕುತೂಹಲದ ನೋಟಕ್ಕೆ ಕಾರಣವಾಗಿತ್ತು. ಈಗ ಎಸ್.ಆರ್.ಶ್ರೀನಿವಾಸ್, ಡಿ.ಸಿ.ಗೌರಿಶಂಕರ್, ಬೆಮಲ್ ಕಾಂತರಾಜು ಅವರು ಜೆಡಿಎಸ್‌ನಿಂದ ವಿಮುಖರಾಗುತ್ತಾರೆ ಎನ್ನುವ ಸುದ್ದಿ ಜಿಲ್ಲಾ ರಾಜಕಾರಣದ ಅಂಗಳದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.