ಗುಬ್ಬಿ: ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರಗಳು ಸಹಕಾರಿ ಎಂದು ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಚೇಳೂರಿನಲ್ಲಿ ಕುಂಚಿಟಿಗ ಮಹಾಸಭಾದಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಓದಿನ ಜೊತೆ ಸಂಸ್ಕಾರ ರೂಢಿಸಿಕೊಂಡು ಗೌರವಯುತ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು. ಸನ್ಮಾನವು ಜವಾಬ್ದಾರಿಯನ್ನು ಹೆಚ್ಚಿಸುವುದರಿಂದ ಮಕ್ಕಳು ಸಿಕ್ಕಿರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಬದುಕಿನ ಗುರಿ ತಲುಪಬೇಕು ಎಂದರು.
ಹಾಲಪ್ಪ ಪ್ರತಿಷ್ಠಾನದ ಮುಖಂಡ ಮುರಳಿದರ ಹಾಲಪ್ಪ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಗಮನಹರಿಸಬೇಕು. ಎಲ್ಲ ತಾರತಮ್ಯ ಬದಿಗೊತ್ತಿ ಒಗ್ಗಟ್ಟಿನಿಂದ ಇದ್ದಲ್ಲಿ ಮಾತ್ರ ಅಗತ್ಯ ಸೌಕರ್ಯಗಳನ್ನು ಪಡೆಯಲು ಸಾಧ್ಯ ಎಂದರು.
ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ವಿಶೇಷ ಕ್ರಿಯಾ ಯೋಜನೆ ರೂಪಿಸಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತರಬೇತಿ ಕೇಂದ್ರಗಳನ್ನು ತೆರೆಯಲು ಆಲೋಚಿಸಲಾಗುತ್ತಿದೆ ಎಂದು ಹೇಳಿದರು.
ಕುಂಚಿಟಿಗ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಯಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಸಮುದಾಯವು ಬಲಾಢ್ಯವಾಗಿದ್ದರೂ ರಾಜಕೀಯ ಶಕ್ತಿ ಪಡೆಯಲು ಸಾಧ್ಯವಾಗದಿರುವುದು ದುರಾದೃಷ್ಟಕರ. ಸಮುದಾಯದ ಒಡಕನ್ನು ಬೇರೆಯವರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಒಕ್ಕಲಿಗ ದಂತ ಮಹಾವಿದ್ಯಾಲಯದ ಅಧ್ಯಕ್ಷ ಜೆ. ರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಮುದಾಯವನ್ನು ಸಂಘಟಿಸಬೇಕು. ಸಮುದಾಯದವರು ರಾಜಕೀಯ ಶಕ್ತಿ ಪಡೆಯುವ ಜೊತೆಗೆ ಶೈಕ್ಷಣಿಕವಾಗಿಯೂ ಮುಂದೆ ಬರಬೇಕಿದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕುಂಚಿಟಿಗ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್, ಹಿರಿಯೂರು ತಾಲ್ಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಶಿವಣ್ಣ, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.