ADVERTISEMENT

ಪರಿಶಿಷ್ಟ ಜಾತಿಯ ಸಾಂಸ್ಕೃತಿಕ ಸಮಾವೇಶಕ್ಕೆ ಸಿದ್ಧತೆ

ಹಿರಿಯೂರಿನಲ್ಲಿ ಸಮಾವೇಶ ಆಯೋಜನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 14:33 IST
Last Updated 21 ಫೆಬ್ರುವರಿ 2023, 14:33 IST

ತುಮಕೂರು: ಹೊಲೆಯ, ಮಾದಿಗ ಸಮುದಾಯದ ಸಾಂಸ್ಕೃತಿಕ ಸಮಾವೇಶಕ್ಕೆ ಸಿದ್ಧತೆಗಳನ್ನು ಕೈಗೊಂಡಿದ್ದು, ಮಾರ್ಚ್‌ ಮೊದಲ ವಾರದಲ್ಲಿ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದಲ್ಲಿ ಸಮಾವೇಶ ಆಯೋಜಿಸಲಾಗಿದೆ.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ. ಒಳ ಮೀಸಲಾತಿ ವಿಷಯದಲ್ಲಿ ಎರಡು ಜಾತಿಗಳು ಸೇರಿ ಕಳೆದ 72 ದಿನಗಳಿಂದ ಬೆಂಗಳೂರಿನ ಉದ್ಯಾನವನದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ 50 ವರ್ಷಗಳ ಮೀಸಲಾತಿ ಕೂಗಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ರತಿ ಚುನಾವಣೆಯಲ್ಲೂ ಪ್ರಚಾರದ ಅಸ್ತ್ರವಾಗಿ ಮೀಸಲಾತಿಯನ್ನು ಬಳಸುತ್ತಿದ್ದಾರೆ ಎಂದು ಮಠದ ಪ್ರಧಾನ ಟ್ರಸ್ಟಿ ಕೋಡಿಹಳ್ಳಿ ಸಂತೋಷ್‌ ಇಲ್ಲಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.

ಒಳ ಮೀಸಲಾತಿಯ ಹೋರಾಟದ ಭೂಮಿಕೆಯಲ್ಲಿ ಹೊಲೆಯ, ಮಾದಿಗ ಸಮುದಾಯಗಳು ಮತ್ತೆ ಒಂದಾಗಿವೆ. ಕೃತಕವಾಗಿ ಎಡ, ಬಲ ಎಂದು ವಿಂಗಡಣೆಯಾಗಿದ್ದು, ಸಾಂಸ್ಕೃತಿಕವಾಗಿ ಒಂದೇ ಆಗಿವೆ. ಬೃಹನ್ಮಠದ ಅಭಿವೃದ್ಧಿಗೂ ಎರಡೂ ಸಮುದಾಯಗಳು ತಮ್ಮದೇ ಆದ ಕೊಡುಗೆ ನೀಡಿವೆ. ಹೊಲೆಯ, ಮಾದಿಗರ ಸಾಂಸ್ಕೃತಿಕ ಪ್ರತಿಷ್ಠಾನ ರಚನೆಯ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಗುರುಪ್ರಕಾಶ್ ಮುನಿ ಸ್ವಾಮೀಜಿ, ‘ಎಡಗೈ, ಬಲಗೈ ಸಮುದಾಯದವರು ಅಣ್ಣ ತಮ್ಮಂದಿರು ಇದ್ದಂತೆ. ಎಲ್ಲರನ್ನು ಒಟ್ಟಿಗೆ ಬೆಸೆಯುವ ಒತ್ತಾಸೆ ಕೇಳಿ ಬರುತ್ತಿದೆ’ ಎಂದರು.

ಹನುಮನಹಳ್ಳಿ ವೆಂಕಟಾವಧೂತ ಆಶ್ರಮದ ಭೂತಪ್ಪ ಸ್ವಾಮಿ, ಮುಖಂಡರಾದ ಎಸ್‌.ನಾಗಕುಮಾರ್, ಕೊಟ್ಟ ಶಂಕರ್, ಎಂ.ಚಿದಾನಂದ್, ಆರ್‌.ಪೂಜಪ್ಪ, ರಂಗಸ್ವಾಮಿ, ಗೀತಾ ನಾಗಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.