ADVERTISEMENT

ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 17:06 IST
Last Updated 4 ಏಪ್ರಿಲ್ 2019, 17:06 IST
ಸಿ.ಟಿ.ರವಿ
ಸಿ.ಟಿ.ರವಿ   

ತುಮಕೂರು: ‘ಮೇಡಂ (ಸೋನಿಯಾ ಗಾಂಧಿ) ಮುಖ ನೋಡಿಕೊಂಡು ಸುಮ್ಮನಿದ್ದೇನೆ. ಲೋಕಸಭೆ ಚುನಾವಣೆ ಆಗುವವರೆಗೂ ಸಹಿಸಿಕೊಂಡು ಸುಮ್ಮನಿರಿ. ಆ ಮೇಲೆ ಸರ್ಕಾರವೇ ಬಿದ್ದು ಹೋಗುತ್ತೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಅವರು ಅವರ ಆಪ್ತರೊಬ್ಬರ ಬಳಿ ಹೇಳಿಕೊಂಡಿದ್ದು, ಈ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತು ಹೋಗಲಿ ಎಂದು ಕಾಂಗ್ರೆಸ್‌ನವರು, ಕಾಂಗ್ರೆಸ್ ಅಭ್ಯರ್ಥಿ ಸೋಲಲಿ ಎಂದು ಪರಸ್ಪರ ಜೆಡಿಎಸ್, ಕಾಂಗ್ರೆಸ್‌ನವರು ತಂತ್ರ ರೂಪಿಸುತ್ತಿದ್ದಾರೆ’ ಎಂದು ಹೇಳಿದರು.

ಅತಿ ಆಸೆ ಗತಿಗೇಡು: ಅತಿಯಾಸೆಯಿಂದ ದೇವೇಗೌಡರ ಕುಟುಂಬಕ್ಕೆ ಗತಿಕೇಡುಗಾಲಿದೆ. ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಅತೀ ಆಸೆಯಿಂದ ಸ್ಪರ್ಧೆ ಮಾಡಿದ್ದಾರೆ. ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದು ಲೋಕಸಭಾ ಚುನಾವಣೆಯಲ್ಲಿ ಹಣದ ಹೊಳೆಯನ್ನು ಹರಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

ADVERTISEMENT

ಇಂದಿರಾ ಗಾಂಧಿ ಗರೀಬಿ ಹಠಾವೊ ಎಂದು ಹೇಳಿಕೊಂಡೇ ಬಂದರು. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಬಡತನ ನಿರ್ಮೂಲನೆ ಎಂದು ಹೇಳಿಕೊಂಡು ಬಂದರು. ಬಡವರ ಬಡತನ ನಿರ್ಮೂಲನೆ ಆಗಲೇ ಇಲ್ಲ. ಅಜ್ಜಿ, ಅಪ್ಪ, ಅಮ್ಮ ಹೇಳಿದ್ದನ್ನೇ ಮೊಮ್ಮಗ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಬಡತನ ನಿರ್ಮೂಲನೆಗೆ ಆದಾಯ ಖಾತ್ರಿ ಯೋಜನೆ ಹೆಸರಿನಲ್ಲಿ ಬಡ ಕುಟುಂಬಕ್ಕೆ ₹ 72 ಸಾವಿರ ಜಮಾ ಮಾಡುವುದಾಗಿ ಹೇಳಿದ್ದಾರೆ. ಇದೂ ಹಾಗೆಯೇ ಆಗಲಿದೆ’ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.