ADVERTISEMENT

ದೇವೇಗೌಡರಿಗೆ ಮಾಜಿ ಶಾಸಕ ಸುರೇಶ್‌ಗೌಡ ಅಗೌರವ ತೋರಿಲ್ಲ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 13:13 IST
Last Updated 4 ಏಪ್ರಿಲ್ 2019, 13:13 IST
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೇಮಾವತಿ ನೀರಿಲ್ಲದೇ ಒಣಗಿದ ಕೆರೆ ಚಿತ್ರವನ್ನು ವೈ.ಎಚ್.ಹುಚ್ಚಯ್ಯ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೇಮಾವತಿ ನೀರಿಲ್ಲದೇ ಒಣಗಿದ ಕೆರೆ ಚಿತ್ರವನ್ನು ವೈ.ಎಚ್.ಹುಚ್ಚಯ್ಯ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು   

ತುಮಕೂರು: ‘ತಾಲ್ಲೂಕಿನ ಹೊನಸಿಗೆರೆಯಲ್ಲಿ ಈಚೆಗೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರು ಮಾತನಾಡುವಾಗ ದೊಣ್ಣೆ ಹಿಡಿದುಕೊಂಡು ಕಾವಲು ಕಾಯುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆಯೇ ಹೊರತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಮಾತನಾಡಿಲ್ಲ’ ಎಂದು ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತುಮಕೂರು ಗ್ರಾಮಾಂತರ ಶಾಸಕರ ಧೋರಣೆಯನ್ನು ಖಂಡಿಸಿದ್ದಾರೆಯೇ ಹೊರತು ದೇವೇಗೌಡರ ಬಗ್ಗೆ ಎಲ್ಲೂಏನನ್ನೂ ಮಾತನಾಡಿಲ್ಲ. ದೇವೇಗೌಡರ ಬಗ್ಗೆ ಸುರೇಶ್‌ಗೌಡರಿಗೆ ಅಪಾರವಾದ ಗೌರವ ಇದೆ. ಮಾತನಾಡುವಾಗ ಬಾಯಿ ತಪ್ಪಿನಿಂದ ‘ಅವರು’ ಎನ್ನುವಪದ ‘ಅವನು’ ಆಗಿದೆ ಬಿಟ್ಟರೆ ಅವರ ಬಗ್ಗೆ ಎಲ್ಲೂ ಕೇವಲವಾಗಿ ಮಾತನಾಡಿಲ್ಲ . ದೃಶ್ಯ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಿ ಪ್ರಸಾರ ಮಾಡಲಾಗಿದೆ. ಪದಗಳನ್ನು ತಿರುಚಲಾಗಿದೆ’ ಎಂದು ಆರೋಪಿಸಿದರು.

‘ಮಾಜಿ ಶಾಸಕ ಸುರೇಶ್‌ಗೌಡರ ಆಡಿದ ಮಾತಿನಲ್ಲಿ ನೋವು ಅಡಗಿದೆ. ಹೇಮಾವತಿ ನದಿ ನೀರು ಹರಿದು ಸಮುದ್ರಕ್ಕೆ ಹೋದರೂ ತುಮಕೂರುಜಿಲ್ಲೆಗೆ ನೀರು ಸಮರ್ಪಕವಾಗಿ ಹರಿಯಲಿಲ್ಲ. ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ, ಗೂಳೂರು, ಹೊನ್ನುಡಿಕೆ ಗ್ರಾಮದ ಕೆರೆಗಳು ಬತ್ತಿಹೋಗಿವೆ. ಒಂದು ಕೆರೆಗೂ ನೀರು ಹರಿಸಿಲ್ಲ. ಕ್ಷೇತ್ರದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಈ ಸಂಕಟವನ್ನು ಸುರೇಶ್‌ಗೌಡ ಮಾತಿನಲ್ಲಿ ಆ ದಿನ ವ್ಯಕ್ತಪಡಿಸಿದ್ದರು’ ಎಂದು ವಿವರಿಸಿದರು.

ADVERTISEMENT

‘ಮಾಜಿ ಶಾಸಕ ಸುರೇಶ್‌ಗೌಡರು ರೈತರ ಪರ, ಬಡವರ ಪರ ಕೆಲಸ ಮಾಡಿದ್ದಾರೆ. ಅವರ ಶಾಸಕರಾಗಿದ್ದಾಗ ಹಿಂದಿನ ವರ್ಷದಲ್ಲಿ ಹೇಮಾವತಿ ನೀರುತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹರಿದು ಬಂತು. ಕೆರೆಗಳನ್ನು ತುಂಬಿಸಿದ್ದರು. ಈಗ ಕೆರೆಗಳಲ್ಲಿ ನೀರಿಲ್ಲ. ಕೊಳವೆ ಬಾವಿಗಳು ಬತ್ತುತ್ತಿವೆ. ಅಡಿಕೆ, ತೆಂಗು ತೋಟದ ರೈತರು ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಗುಳೇ ಹೋಗಬೇಕಾದ ಸ್ಥಿತಿಗೆ ಬಂದಿದ್ದಾರೆ. ಈ ಎಲ್ಲ ಅಂಶಗಳ ಮೇಲೆ ಸುರೇಶ್‌ಗೌಡ ಮಾತನಾಡಿದ್ದು, ವಸ್ತು ಸ್ಥಿತಿ ಬಿಚ್ಚಿಟ್ಟ ಅವರನ್ನು ಖನನಾಯಕರಂತೆ ಬಿಂಬಿಸಲು ಹೊರಟಿರುವುದು ಸರಿಯಲ್ಲ’ ಎಂದು ಹೇಳಿದರು.

‘ಕ್ಷೇತ್ರಕ್ಕೆ ಹೇಮಾವತಿ ನೀರು ಬರದೇ ಇದ್ದಾಗ ಹೇಮಾವತಿ ವಲಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದ ಕೋರ್ಟ್‌ಗೆ ಅಲೆದಾಡಿದರೂ ಕ್ಷೇತ್ರದ ಕೆರೆಗಳಿಗೆ ನೀರು ಬಂದಿತು. ಇದೆಲ್ಲವನ್ನು ಜನರ ಮುಂದೆ ಆ ದಿನದ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಹೇಮಾವತಿ ನೀರಿನ ವಿಚಾರದಲ್ಲಿ ಮಾಜಿ ಶಾಸಕ ಸುರೇಶ್‌ಗೌಡರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಅದರೆ, ಅದು ಸಾಧ್ಯವಿಲ್ಲದ ಮಾತು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೂಳೂರು ಶಿವಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ, ಮುಖಂಡರಾದ ಸಿದ್ಧೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಪ್ಪ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.