ಕುಣಿಗಲ್: ಪುರಸಭೆಯ ಆಸ್ತಿ ತೆರಿಗೆ ಚಲನ್‌ಗಳಿಗೆ ಕೆನರಾ ಬ್ಯಾಂಕ್ ನಕಲಿ ಮೊಹರು ಬಳ ನಾಗರಿಕರು ಮತ್ತು ಪುರಸಭೆಗೆ ವಂಚಿಸಿದ ಆರೋಪದ ಮೇಲೆ ಪತ್ರಕರ್ತ ಕೆ.ಎಸ್.ಕೃಷ್ಣ ಮತ್ತು ಬ್ಯಾಂಕ್ ಮೊಹರು ಮಾಡಿಕೊಟ್ಟ ವೈಷ್ಣವಿ ಪ್ರಿಟಂರ್ಸ್ ಮಾಲೀಕ ರಾಜೇಂದ್ರ ಅವರನ್ನು ಪುರಸಭೆ ಮುಖ್ಯಾಧಿಕಾರಿ ಮಂಜುಳಾ ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಮುಖ್ಯಾಧಿಕಾರಿ ಮಂಜುಳಾ ದೂರು ನೀಡಿದ್ದರು. ಆಸ್ತಿ ತೆರಿಗೆ ವಹಿಯಲ್ಲಿ ತೆರಿಗೆ ನಮೂದು ಮಾಡಿಸಲು ಬಂದ ನಾಗರಾಜು ಅವರು ಚಲನ್‌ನಲ್ಲಿ ನಮೂದಾಗಿರುವ ಬ್ಯಾಂಕ್ ಸೀಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಪರಿಶೀಲಿಸಿದಾಗ ಸೀಲ್ ನಕಲಿ ಎನ್ನುವುದು ಖಚಿತವಾಯಿತು. ದಾಖಲೆಗಳನ್ನು ಪರಿಶೀಲಿಸಿದಾಗ ಪುರಸಭೆ ಖಾತೆಗೆ ₹42,072 ಪಾವತಿಯಾಗದಿರುವುದು ಕಂಡು ಬಂದಿದೆ. ನಾಗರಾಜು ಅವರನ್ನು ವಿಚಾರಿಸಿದಾಗ ಕೃಷ್ಣ ಹಣ ಪಡೆದು ಚಲನ್ ನೀಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಪುರಸಭೆಗೆ ಆರ್ಥಿಕ ನಷ್ಟವಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದರು.
ಸುಮಾರು 100ಕ್ಕೂ ಹೆಚ್ಚು ಮಂದಿ ಪಾವತಿಸಿದ ಲಕ್ಷಾಂತರ ರೂಪಾಯಿ ಹಣ ಪುರಸಭೆ ಖಾತೆಗೂ ಬಂದಿಲ್ಲ, ಬ್ಯಾಂಕ್‌ಗೂ ಸೇರಿಲ್ಲ. ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ನಾಗರಿಕರು ಪುರಸಭೆಯಿಂದ ಮೂರು ಮಾದರಿಯ ಚಲನ್ ಪಡೆದು ಕೆನರಾ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡಬೇಕು. ಆರೋಪಿ ಕೃಷ್ಣ ಅವರು ಬ್ಯಾಂಕ್‌ನಲ್ಲಿ ಸರತಿ ಸಾಲು ಹೆಚ್ಚಾಗಿದೆ ಎಂದು ಕೆಲವರಿಗೆ ತಿಳಿಸಿ, ಮತ್ತೂ ಕೆಲವರಲ್ಲಿ ಹಣದ ಕೊರತೆ ಗಮನಿಸಿ ತಾವೆ ಕಟ್ಟಿಕೊಡುವ ಭರವಸೆ ನೀಡಿ ಕೆಲ ಸಮಯದ ನಂತರ ಬ್ಯಾಂಕ್ ಸೀಲ್ ಹಾಕಿರುವ ಚಲನ್ ನೀಡುತ್ತಿದ್ದರು ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಪುರಸಭೆ ಸದಸ್ಯ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕಳೆದ ವಾರ ಆಸ್ತಿ ತೆರಿಗೆ ಚಲನ್ ಪಡೆದು ಪಾವತಿಗೆ ತೆರಳುವ ಸಮಯದಲ್ಲಿ ಹಣದ ಕೊರತೆ ಕಂಡು ಬಂತು. ಆಗ ಕೃಷ್ಣ, ತಾವೆ ಪಾವತಿಸುವುದಾಗಿ ತಿಳಿಸಿ ₹60,500 ಪಾವತಿಸಿದ ಬ್ಯಾಂಕ್ ಚಲನ್ ನೀಡಿದ್ದರು. ಶುಕ್ರವಾರ ವಿವಾದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಚೇರಿಗೆ ಬಂದು ಪರಿಶೀಲಿಸಿದಾಗ ನಕಲಿ ಸೀಲ್ ಹಾಕಿರುವ ಚಲನೆ ಕಂಡುಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕ್ಕೆ ನಿರ್ಧರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.