ADVERTISEMENT

ನೀರು, ಭೂಮಿ, ಪರಿಸರ ಸಂರಕ್ಷಿಸಿ

ತಾಲ್ಲೂಕಿನ ಊರ್ಡಿಗೆರೆ, ಕೊಡಗಿಹಳ್ಳಿಯಲ್ಲಿ ಜೀವನಾಡಿ ಯುವಜನರಿಂದ ಪರಿಸರ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 16:28 IST
Last Updated 22 ಏಪ್ರಿಲ್ 2019, 16:28 IST
ಜೀವನಾಡಿ ಕಾರ್ಯಕರ್ತರು ಗ್ರಾಮಸ್ಥರೊಬ್ಬರ ಮನೆಗೆ ಭೇಟಿ ನೀಡಿ ನೀರು, ಭೂಮಿ ಹಾಗೂ ಪರಿಸರ ಕುರಿತು ಜಾಗೃತಿ ಮೂಡಿಸಿದರು
ಜೀವನಾಡಿ ಕಾರ್ಯಕರ್ತರು ಗ್ರಾಮಸ್ಥರೊಬ್ಬರ ಮನೆಗೆ ಭೇಟಿ ನೀಡಿ ನೀರು, ಭೂಮಿ ಹಾಗೂ ಪರಿಸರ ಕುರಿತು ಜಾಗೃತಿ ಮೂಡಿಸಿದರು   

ತುಮಕೂರು: ‘ಗಣಿಗಾರಿಕೆ, ಮರಳು ಧಂಧೆ, ಗಿಡಮರಗಳ ನಾಶದಿಂದ ಭೂಮಿಯು ಬಿಸಿಲಿನಿಂದ ಬೆಂಡಾಗುವಂತೆ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಕೈಮುಗಿಯುವವರು ಇಂದು ಕ್ಯಾರೇ ಎನ್ನುತ್ತಿಲ್ಲ’ ಎಂದು ಊರ್ಡಿಗೆರೆ ಮತ್ತು ಕೊಡಗಿಹಳ್ಳಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ವಿಶ್ವ ಭೂಮಿ ದಿನದ ಅಂಗವಾಗಿ ಜೀವನಾಡಿ ಯುವಜನರು ತುಮಕೂರು ತಾಲ್ಲೂಕಿನ ಊರ್ಡಿಗೆರೆ ಮತ್ತು ಕೊಡಗಿಹಳ್ಳಿಯ ಮನೆ– ಮನೆಗೆ ತೆರಳಿ ಗ್ರಾಮಸ್ಥರಲ್ಲಿ ನೀರು, ಭೂಮಿ ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿದರು.

ವಾತಾವರಣ ಬಿಸಿಯಾಗಿ ನೀರು ಸಿಗದಂತಾಗಿರುವುದಕ್ಕೆ ಸಹಜ ಕಾರಣಗಳು ಯಾವುವೂ ಇಲ್ಲ. ಹಾಗಾಗಿ ಮುಖ್ಯವಾಗಿ ಗಣಿಗಾರಿಕೆ ನಿಲ್ಲಿಸಿ, ಪರಿಸರ ಉಳಿವಿಗೆ ಗಿಡ ಮರಗಳನ್ನು ಬೆಳೆಸುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ಯುವಜನರು ಈ ರೀತಿ ಗ್ರಾಮಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೆ ತಾವು ಅನುಭವಿಸಿದ ಸ್ವಚ್ಛಂದ ದಟ್ಟ ಪರಿಸರ, ಭೂ ಮೇಲ್ಮೈ ಮೇಲೆ ಸಿಗುತ್ತಿದ್ದ ಶುದ್ದ ನೀರು, ಜನರ ಶ್ರಮಜೀವನ, ಸಾಕಾಗುವಷ್ಟು ಬೆಳೆ ಕೊಡುತ್ತಿದ್ದ ಭೂತಾಯಿ ಶಕ್ತಿ ಮೊದಲಾದವನ್ನು ನೆನೆದರು ಮತ್ತು ಅವೆಲ್ಲವೂ ನಾಶವಾಗಿರುವುದಕ್ಕೆ ಮರುಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೀವನಾಡಿ ಸಂಚಾಲಕ ನಂದನ್ ಖಂಡೇನಹಳ್ಳಿ ಅವರು, ‘ಪರಿಸರದ ಹೋರಾಟ ಹಾಗೂ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಿಗೆ ತಲುಪಿಸುತ್ತಿದ್ದೇವೆ. ‘ಪರಿಸರ ಬದಲಾವಣೆಗಳ ಜ್ಞಾನವಿದೆ ಎಂಬುದನ್ನು ತಿಳಿಯಲು ಬನ್ನಿ ಹಳ್ಳಿ ಹಳ್ಳಿಗೆ ಹೋಗೋಣ’ ಎನ್ನುವ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.

ಜೀವನಾಡಿ ಕಾರ್ಯಕರ್ತ ಕೆ.ಪಿ.ಮಧುಸೂದನ ಅವರು ಇಂದು ಗ್ರಾಮಗಳ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡಲು ಅವರ ಸಮಸ್ಯೆಗಳನ್ನು ಆಲಿಸಸುವವರು ಯಾರು ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಜೀವನಾಡಿಯ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕರ್ತೆ ರಶ್ಮಿ ಅವರು ಜನರೊಂದಿಗೆ ಹಲವು ಪ್ರಶ್ನೆಗಳನ್ನು ಕೇಳಿ ಸ್ಥಳೀಯ ಸಮಸ್ಯೆಗಳು ಮತ್ತು ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.