ADVERTISEMENT

ತುಮಕೂರು: ಸೇವೆಗಳ ಖಾಸಗೀಕರಣಕ್ಕೆ ವಿರೋಧ

ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರ ಧರಣಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:55 IST
Last Updated 7 ಆಗಸ್ಟ್ 2020, 14:55 IST
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು   

ತುಮಕೂರು: ಆರೋಗ್ಯ, ಬಿಸಿಯೂಟ, ಶಿಕ್ಷಣ ಸೇರಿದಂತೆ ಅಗತ್ಯ ಮೂಲ ಸೇವೆಗಳ ಖಾಸಗೀಕರಣ ಪ್ರಸ್ತಾಪಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸೇವೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಿ ಕಾಯಂ ಮಾಡಬೇಕು. ಪ್ರತಿ ತಿಂಗಳಿಗೆ ₹ 21,000 ಕನಿಷ್ಠ ವೇತನ ನೀಡಬೇಕು. ಮಾಸಿಕ ₹ 10,000 ಪಿಂಚಣಿ ಕೊಡಬೇಕು. ಇಎಸ್‌ಐ, ಪಿಎಫ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕಾರ್ಮಿಕ ಕಾಯ್ದೆಗಳನ್ನು ಮಾಲೀಕರ ಪರವಾಗಿ ಬದಲಾಯಿಸುವುದನ್ನು ನಿಲ್ಲಿಸಬೇಕು. ಕೊರೊನಾ ಅವಧಿಯ ನೆಪವೊಡ್ಡಿ ಕೆಲಸದ ಅವಧಿ ಹೆಚ್ಚಿಸುವುದನ್ನು ಕೈಬಿಡಬೇಕು. ಉಚಿತ ಪಡಿತರ ಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೊರೊನಾ ವಿರುದ್ಧ ದುಡಿಯುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷಾ ಸಾಧನ, ಪಿಪಿಇ ಕಿಟ್‍ಗಳನ್ನು ನೀಡಬೇಕು. ಕೊರೊನಾದಿಂದ ಮೃತಪಟ್ಟರೆ ₹ 50 ಲಕ್ಷ ವಿಮಾ ಸೌಲಭ್ಯ ಖಾತ್ರಿಪಡಿಸಬೇಕು. ಅವಲಂಬಿತರಿಗೆ ಪಿಂಚಣಿ, ಕಾಯಂ ಉದ್ಯೋಗ ಕಲ್ಪಿಸಬೇಕು ಎಂದು ಕೋರಿದರು.

ಕೆಲಸದಲ್ಲಿ ಇದ್ದಾಗ ಸೋಂಕಿತರಾಗುವ ಎಲ್ಲ ಕಾರ್ಮಿಕರಿಗೂ ಕನಿಷ್ಠ ₹ 10 ಲಕ್ಷ ಪರಿಹಾರ ನಿಧಿ ನೀಡಬೇಕು. ಅಕ್ಷರ ದಾಸೋಹದಲ್ಲಿ ಕೇಂದ್ರೀಕೃತ ಅಡುಗೆ ಪದ್ಧತಿ ಮತ್ತು ಗುತ್ತಿಗೆ ಪದ್ಧತಿ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರ ಸಂಘದ ತುಮಕೂರು ತಾಲ್ಲೂಕು ಘಟಕದ ಅಧ್ಯಕ್ಷೆ ಗೌರಮ್ಮ, ವಿನೋದ, ಖಜಾಂಚಿ ಜಬೀನಾ, ಪುಷ್ಪಾ, ನಾಗರತ್ನ, ಗೌರಮ್ಮ, ರಾಜಮ್ಮ, ಅನಸೂಯ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.