ADVERTISEMENT

ಬಿಸಿಯೂಟ ತಯಾರಕರಿಗೆ ಗೌರವಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:53 IST
Last Updated 12 ಆಗಸ್ಟ್ 2020, 16:53 IST
ಗೌರವಧನ ಬಿಡುಗಡೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು
ಗೌರವಧನ ಬಿಡುಗಡೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು   

ತುಮಕೂರು: ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ತಯಾರಕರಿಗೆ ಏಪ್ರಿಲ್‌ನಿಂದ ಜುಲೈವರೆಗಿನ ವೇತನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಳೆದ 17 ವರ್ಷಗಳಿಂದ ಬಿಸಿಯೂಟ ತಯಾರಕರು ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ 1.18 ಲಕ್ಷ ಬಿಸಿಯೂಟ ತಯಾರಕರು ಕನಿಷ್ಠ ವೇತನ ಕಾಯ್ದೆಗೆ ಒಳಪಡದೆ ಗೌರವಧನ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸ ಕಾಯಂ, ಕನಿಷ್ಠ ವೇತನ, ಇಎಸ್‍ಐ, ಪಿಎಫ್, ನಿವೃತ್ತಿ ವೇತನ, ಅಪಘಾತ ಪರಿಹಾರ, ಮರಣ ಪರಿಹಾರ ಧನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕಲು ಹೋರಾಟ ಮಾಡುತ್ತಿದ್ದರೂ ಸರ್ಕಾರ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

ಲಾಕ್‍ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ₹ 5 ಸಾವಿರ ಪರಿಹಾರ ನೀಡಲಾಗಿದೆ. ಬಿಸಿಯೂಟ ತಯಾರಕರಿಗೆ ಇಂತಹ ಸೌಲಭ್ಯವಿಲ್ಲ. ನಾಲ್ಕು ತಿಂಗಳಿಂದ ವೇತನವಿಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಶೀಘ್ರ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಸಂಚಾಲಕ ಸಿ.ಎಸ್.ಸತ್ಯನಾರಾಯಣ, ಗುಬ್ಬಿ ತಾಲ್ಲೂಕು ಸಂಚಾಲಕ ದೊಡ್ಡತಿಮ್ಮಯ್ಯ, ಪದಾಧಿಕಾರಿಗಳಾದ ವನಜಾಕ್ಷಮ್ಮ, ಕಂಬೇಗೌಡ, ಸಾವಿತ್ರಮ್ಮ, ಉಮಾದೇವಿ, ನಾಗರತ್ನಮ್ಮ, ಪದ್ಮ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.