ADVERTISEMENT

ತುಮಕೂರು | ಜುಲೈ 3ರಂದು ದೇಶದಾದ್ಯಂತ ಪ್ರತಿಭಟನೆ

ವೈದ್ಯಕೀಯ ಚಿಕಿತ್ಸೆ ಕೊಡಬೇಕಾದ ಸರ್ಕಾರ ಪ್ರಜಾಸತ್ತಾತ್ಮಕತೆಗೆ ದ್ರೋಹ; ಸಿಐಟಿಯು ಆರೋಪ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:50 IST
Last Updated 30 ಜೂನ್ 2020, 16:50 IST
ಗಿರೀಶ್, ಸೈಯದ್ ಮುಜೀಬ್
ಗಿರೀಶ್, ಸೈಯದ್ ಮುಜೀಬ್   

ತುಮಕೂರು: ನಗರ, ಗ್ರಾಮೀಣ ಪ್ರದೇಶದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಧಾವಿಸದಿರುವುದನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ದೇಶದಾದ್ಯಂತ ಜುಲೈ 3ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಉಂಟಾಗಿರುವ ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನಾಗಿ ನೋಡುತ್ತಿರುವುದು ಸರಿಯಲ್ಲ. ವೈದ್ಯಕೀಯ ಚಿಕಿತ್ಸೆ ಕೊಡಬೇಕಾದ ಸರ್ಕಾರಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಪ್ರತಿ ಕುಟುಂಬಕ್ಕೂ₹7,500, ಪ್ರತಿ ವ್ಯಕ್ತಿಗೆ ₹10 ಕೆ.ಜಿ ಪಡಿತರ ನೀಡಬೇಕು. ಜನರ ಹಕ್ಕು ದಮನ ಮಾಡುವುದನ್ನು ನಿಲ್ಲಿಸಬೇಕು. ಕೊರೊನಾ ವಾರಿಯರ್ಸ್‌ಗಳಿಗೆ ಸೂಕ್ತ ಭದ್ರತೆ ನೀಡಬೇಕು. ಜನರು, ಕಾರ್ಮಿಕರು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ‘ನವರತ್ನಕಂಪನಿಗಳ ಖಾಸಗೀಕರಣ ನಿಲ್ಲಿಸಬೇಕು. ಬಂಡವಾಳ ಹಿಂತೆಗೆತದಿಂದ ಕಾರ್ಪೋರೇಟ್ಕಂಪನಿಗಳಿಗೆ ಲಾಭ ಮಾಡಿಕೊಡಲು ಹೊರಟಿದೆ. ದೇಶದಲ್ಲಿ ಆರ್ಥಿಕತೆ ಕುಸಿದಿದ್ದು ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣವಾಗಿದೆ’ ಎಂದು ಟೀಕಿಸಿದರು.

ಐಎನ್‌ಟಿಯುಸಿ ಮುಖಂಡ ಬಿ.ಎಚ್.ರಾಜು, ‘ಕೋವಿಡ್ ನಿಯಂತ್ರಿಸಿ ಜನರನ್ನು ಸಂರಕ್ಷಿಸಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ಕೈಚೆಲ್ಲಿ ಕುಳಿತಿವೆ. ಕೇಂದ್ರ ತನ್ನ ಜವಾಬ್ದಾರಿಯಿಂದ ನುಣಿಚಿಕೊಂಡು ರಾಜ್ಯಗಳಿಗೆ ವರ್ಗಾಯಿಸಿದೆ’ ಎಂದು ಆರೋಪಿಸಿದರು.

ಎಐಟಿಯುಸಿ ಮುಖಂಡ ಕಂಬೇಗೌಡ ಇದ್ದರು.

ಏಕಪಕ್ಷೀಯ ನಿರ್ಧಾರ
ಕೊರೊನಾ ಸೋಂಕು ನಿವಾರಣೆಗೆ ಶ್ರಮಿಸಬೇಕಿದ್ದ ಸರ್ಕಾರಗಳು ಜನವಿರೋಧಿ ಕಾರ್ಯದಲ್ಲಿ ನಿರತವಾಗಿವೆ. ಎಪಿಎಂಸಿ, ಭೂಸುಧಾರಣೆ, ಅಗತ್ಯಸೇವೆ, ವಿದ್ಯುತ್, ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಹೊರಟಿದ್ದು ಯಾರ ಹಿತಕಾಯಲು? ಕಾಯ್ದೆಗಳ ತಿದ್ದುಪಡಿ ಬಗ್ಗೆ ಸಂಸತ್ತು, ವಿಧಾನಸಭೆಯಲ್ಲಿ ಚರ್ಚಿಸದೆ ಏಕಪಕ್ಷೀಯವಾಗಿ ಹೇರಿಕೆ ಮಾಡುತ್ತಿದೆ ಎಂದು ಸೈಯದ್ ಮುಜೀಬ್ ಟೀಕಿಸಿದರು.

₹20 ಲಕ್ಷ ಕೋಟಿ; ಮೋಸ
ಸಣ್ಣ ಕೈಗಾರಿಕೆಗಳು ಮುಚ್ಚಿದ್ದು, ಉದ್ಯೋಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ₹20 ಲಕ್ಷ ಕೋಟಿ ನೀಡಿದ್ದೇವೆ ಎಂದು ಹೇಳಿಕೊಂಡು ಮೋಸ ಮಾಡುತ್ತಿವೆ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸ್ಕೀಂ ನೌಕರರಿಗೆ ಗೌರವಧನ ಧನ ನೀಡಬೇಕು ಎಂದುಗಿರೀಶ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.