ಪಾವಗಡ: ತಾಲ್ಲೂಕಿನ ಬಡ ಜನರಿಗೆ ನಿವೇಶನ ಮಂಜೂರು ಮಾಡಬೇಕು, ಬಡ ಜನರ ಪಡಿತರ ಚೀಟಿ ರದ್ದು ಪಡಿಸಬಾರದು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.
ತಾಲ್ಲೂಕಿನ ನಲಿಗಾನಹಳ್ಳಿ ಸರ್ವೆ ನಂಬರ್ 4ರಲ್ಲಿ 17 ಎಕರೆ 20 ಗುಂಟೆ ಸರ್ಕಾರಿ ಜಮೀನಿದೆ. ನಲಿಗಾನಹಳ್ಳಿ, ಆರ್ಲಹಳ್ಳಿ, ಬಿ.ದೊಡ್ಡಹಟ್ಟಿ ಗ್ರಾಮದ ಬಡ ಜನರಿಗೆ ನಿವೇಶನಗಳಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರಿ ಜಮೀನನ್ನು ನಿವೇಶನಕ್ಕೆ ಮೀಸಲಿರಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆಗ್ರಹಿಸಿದರು.
ಸರ್ಕಾರಿ ಜಮೀನಿನಲ್ಲಿ ಕಾವೇರಮ್ಮ, ಜುಂಜಪ್ಪ ದೇಗುಲಗಳಿಗೆ ತಲಾ ಒಂದು ಎಕರೆ ಜಮೀನು ಮಂಜೂರು ಮಾಡಬೇಕು. ಗುಂಡ್ಲಹಳ್ಳಿ ಸರ್ವೆ ನಂಬರ್ 222ರಲ್ಲಿ ಹಕ್ಕುಪತ್ರಗಳನ್ನು ನೀಡಿದ್ದು, ಮನೆಗಳಿಗೆ ಹೋಗಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ರಸ್ತೆ ಸಮಸ್ಯೆ ಬಗೆಹರಿಸಿಕೊಡಬೇಕು ಎಂದರು.
ತಾಲ್ಲೂಕಿನ ಸಾವಿರಾರು ಮಂದಿ ಪಡಿತರ ಚೀಟಿಗಳನ್ನು ಏಕಾಏಕಿ ರದ್ದುಪಡಿಸಲಾಗುತ್ತಿದೆ. ಬಡ ಜನರಿಗೆ ಆಧಾರವಾಗಿರುವ ಸರ್ಕಾರಿ ಯೋಜನೆಗಳಿಂದ ಜನತೆ ವಂಚಿತರಾಗುತ್ತಿದ್ದಾರೆ. ಈಗಾಗಲೇ ರದ್ದುಪಡಿಸಿರುವ ಪಡಿತರ ಚೀಟಿಗಳನ್ನು ಮತ್ತೆ ಮಂಜೂರು ಮಾಡಬೇಕು. ಮುಂದಿನ ದಿನಗಳಲ್ಲಿ ಪಡಿತರ ಚೀಟಿ ರದ್ದುಪಡಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬ್ಯಾಡನೂರು ಶಿವು, ಚಿತ್ತಯ್ಯ, ನರಸಪ್ಪ, ರಮೇಶ, ರಾಮಾಂಜಿ, ಗುಡಿಪಲ್ಲಪ್ಪ, ಹನುಮಂತರಾಯಪ್ಪ, ರಾಮಕೃಷ್ಣ, ಸಿದ್ದಪ್ಪ, ವೀರಭದ್ರಪ್ಪ, ಶ್ರೀರಾಮಪ್ಪ, ಗೊರಪ್ಪ, ಗೋವಿಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.