ADVERTISEMENT

ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ: ₹1 ಲಕ್ಷ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 14:39 IST
Last Updated 31 ಮಾರ್ಚ್ 2023, 14:39 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಬಗರ್‌ ಹುಕುಂ ಸಾಗುವಳಿದಾರರ ಮೇಲೆ ಅರಣ್ಯಾಧಿಕಾರಿಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಬಗರ್‌ ಹುಕುಂ ಸಾಗುವಳಿದಾರರ ಮೇಲೆ ಅರಣ್ಯಾಧಿಕಾರಿಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು   

ತುಮಕೂರು: ಬಗರ್‌ ಹುಕುಂ ಸಾಗುವಳಿದಾರರ ಮೇಲೆ ಹಲ್ಲೆ ನಡೆಸಿ, ಅವರನ್ನು ಒಕ್ಕಲೆಬ್ಬಿಸಲು ಹೊರಟಿರುವ ಅರಣ್ಯಾಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಕ್ಕುಪತ್ರಕ್ಕಾಗಿ ಸಲ್ಲಿಸಿದ ಅರ್ಜಿಗಳು ವಿಲೇವಾರಿಯಾಗಿಲ್ಲ. ಇದರ ಮಧ್ಯೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಗುವಳಿ ಮಾಡುತ್ತಿದ್ದ ರೈತರಿಗೆ ಬೆದರಿಕೆ ಹಾಕಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗುಬ್ಬಿಯ ಎಸಿಎಫ್‌ ಮಹೇಶ್, ರೇಂಜರ್ ದುಗ್ಗಯ್ಯ ಮುಂತಾದವರನ್ನು ವಜಾಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.

ಸಂಘದ ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡನಂಜಯ್ಯ ತಲೆಗೆ ತೀವ್ರ ಪೆಟ್ಟಾಗಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಒಳಗೊಂಡಂತೆ ಹತ್ತಾರು ಜನರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇದಕ್ಕೆ ಅರಣ್ಯ ಅಧಿಕಾರಿಗಳಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ADVERTISEMENT

ಪರಿಶಿಷ್ಟ ಸಮುದಾಯಕ್ಕೆ ಸೇರಿದ ನೂರಾರು ರೈತ ಮಹಿಳೆಯರನ್ನು ಅರಣ್ಯ ಇಲಾಖೆ ಹಿಂಸಿಸಿದೆ. ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗಿದೆ. ಇದು ಬಹಳ ಸ್ಪಷ್ಟವಾಗಿ ರಾಜಕೀಯ ಪ್ರೇರಿತ ಮತ್ತು ಅಧಿಕಾರ ದುರುಪಯೋಗ ಕ್ರಮವಾಗಿದೆ ಎಂದು ದೂರಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ‘ಚೇಳೂರು ಹೋಬಳಿಯ ಬಡ ಸಾಗುವಳಿದಾರರ ಮೇಲೆ ಖಾಸಗಿ ಗೂಂಡಾಗಳನ್ನು ಬಳಸಿ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿದೆ. ನೊಂದ ಎಲ್ಲ ರೈತರಿಗೆ ಕನಿಷ್ಠ ₹1 ಲಕ್ಷ ಪರಿಹಾರ ಘೋಷಿಸಬೇಕು. ಯಾರೂ ಕೂಡ ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿ ಮಾಡದಂತೆ ರಕ್ಷಣೆ ನೀಡಬೇಕು. ನೊಂದವರ ಅಹವಾಲು ಆಲಿಸಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಲು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಲ್ಲೆ ನಡೆಸಿರುವ ಬಗ್ಗೆ ಸಂಪೂರ್ಣ ವರದಿ ಪಡೆದುಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕರಾಳೆ ಭರವಸೆ ನೀಡಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಚಿಂತಕ ಕೆ.ದೊರೈರಾಜ್, ಕೆಪಿಆರ್‌ಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ವಿವಿಧ ಸಂಘಟನೆಗಳ ಮುಖಂಡರಾದ ಭರತರಾಜ್, ನವೀನ್‌ಕುಮಾರ್‌, ಅಜ್ಜಪ್ಪ, ಎನ್‌.ಕೆ.ಸುಬ್ರಮಣ್ಯ, ಬಿ.ಉಮೇಶ್‌, ಸೈಯದ್ ಮುಜೀಬ್, ಸ್ವಾಮಿ, ತಾಜುದ್ದಿನ್, ಅರುಣ್‌, ಪ್ರಭು, ಗೌರಮ್ಮ, ಕೆ.ಕುಮಾರ್, ಶಿವಕುಮಾರ ಸ್ವಾಮಿ, ಯೋಗಿಶ್ ರಾಘವೇಂದ್ರ, ರಾಜಮ್ಮ, ನರಸಿಂಹ ಮೂರ್ತಿ, ಕೋದಂಡಪ್ಪ, ಬಸವರಾಜು, ನಾಗರತ್ನ, ಸಿದ್ದಮ್ಮ, ಚೇತನಾ, ವಿವೇಕಾ, ಅಳ್ಳಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.