ADVERTISEMENT

ವಕೀಲರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:46 IST
Last Updated 4 ಮಾರ್ಚ್ 2021, 3:46 IST
ತುಮಕೂರಿನಲ್ಲಿ ವಕೀಲರು ಮೆರವಣಿಗೆ ನಡೆಸಿದರು
ತುಮಕೂರಿನಲ್ಲಿ ವಕೀಲರು ಮೆರವಣಿಗೆ ನಡೆಸಿದರು   

ತುಮಕೂರು: ವಕೀಲರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ‘ವಕೀಲರ ರಕ್ಷಣಾ ಕಾಯ್ದೆ’ ಜಾರಿಗೆ ತರಬೇಕು ಎಂದು ವಕೀಲರು ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಜಿಲ್ಲಾಧಿಕಾರಿ ಮೂಲಕ ಕೇಂದ್ರ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ನೇತೃತ್ವ ವಹಿಸಿದ್ದರು.

ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ಕೊಲೆಯಾದ ವಕೀಲ ತಾರೇಹಳ್ಳಿ ವೆಂಕಟೇಶ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ವಕೀಲರ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು.

ADVERTISEMENT

ಇತ್ತೀಚಿನ ಘಟನೆಗಳು ವೃತ್ತಿ ನಿರ್ವಹಿಸಲು ವಕೀಲರಲ್ಲಿ ಭಯವನ್ನು ಉಂಟುಮಾಡಿದೆ. ನಿರ್ಭೀತಿಯಿಂದ ವೃತ್ತಿ ನಡೆಸಲು ಅನುಕೂಲವಾಗುವಂತೆ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಆ ಮೂಲಕ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಕಾಯ್ದೆ ಜಾರಿಗೆ ತರಲು ರಾಜ್ಯ ವಕೀಲರ ಪರಿಷತ್ ಸಹ ವಕೀಲರ ಸಂಘದೊಂದಿಗೆ ಸಹಕರಿಸುತ್ತಿದೆ. ಎಲ್ಲರೂ ಒಗ್ಗೂಡಿ ಹೋರಾಟದಲ್ಲಿ ಭಾಗವಹಿಸಿದ್ದು, ಕಾಯ್ದೆ ಜಾರಿಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ ನಡೆದಾಗ ತಕ್ಷಣ ಕ್ರಮ ಕೈಗೊಳ್ಳಲು ಸೂಕ್ತ ನಿಯಮ ರೂಪಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಬಾಬು, ಪ್ರಧಾನ ಕಾರ್ಯದರ್ಶಿ ಬಿ.ಆರ್.ದೇವರಾಜು, ಜಂಟಿ ಕಾರ್ಯದರ್ಶಿ ಎನ್.ಆರ್.ಲೋಕೇಶ್, ಆರ್.ಪಾತಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.