
ಕುಣಿಗಲ್: ನರೇಗಾ ಯೋಜನೆಯ ಶೇ 40 ಸಾಮಗ್ರಿ ಬಿಲ್ ಪಾವತಿಗೆ ಆಗ್ರಹಿಸಿ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಕಚೇರಿಗೆ ಬೀಗ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಚೌಡನಕುಪ್ಪೆ ಗ್ರಾಮ ಪಂಚಾಯಿತಿಯ ಹುಲಿಕಟ್ಟೆ ಸದಸ್ಯೆ ಭಾಗ್ಯಮ್ಮ ಅವರ ಪತಿ ರವಿಕುಮಾರ್ (ಜೆಡಿಎಸ್ ಬೆಂಬಲಿತ) ಮತ್ತು ಸುನೀಲ್ 2021ನೇ ಸಾಲಿನಿಂದ ಈವರೆಗೆ ನರೇಗಾ ಯೋಜನೆಯಲ್ಲಿ ನಡೆಸಿರುವ ಶಾಲಾ ಕಾಂಪೌಂಡ್, ಚರಂಡಿ, ಸಿ.ಸಿ. ರಸ್ತೆ ಇತ್ಯಾದಿ ಕಾಮಗಾರಿಯ ಬಾಪ್ತನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೆಗೌಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ನಿಯಮ ಪಾಲನೆ ಮಾಡದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯ ಕಾಮಗಾರಿ ಮತ್ತು ವೈಯುಕ್ತಿಕ ಕಾಮಗಾರಿಗಳ ಸಾಮಾಗ್ರಿ ಬಾಬ್ತು ಬಿಡುಗಡೆಯಾಗಿದ್ದರೂ, ಪಾವತಿಗೆ ನಿರಾಕರಿಸಿದ ಕಾರಣ ಗ್ರಾಮಸ್ಥರು ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ನೂತನ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದ್ದು, ಹಳೆ ಕಚೇರಿಯಲ್ಲಿನ ನಿರುಪಯುಕ್ತ ಸಾಮಗ್ರಿಗಳನ್ನು ವಿಲೇವಾರಿ ಮಾಡುವಲ್ಲಿ ಹಾಗೂ ಬೀದಿದೀಪ ಖರೀದಿಯಲ್ಲಿ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿದರು.
ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಚರ್ಚಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೆಗೌಡ ನವೆಂಬರ್ 15ರಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಭೆ ಕರೆದು ತೀರ್ಮಾನ ಮಾಡುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.