ADVERTISEMENT

ಸೌಲಭ್ಯ ವಂಚಿತ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:03 IST
Last Updated 4 ಡಿಸೆಂಬರ್ 2021, 3:03 IST
ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಎದುರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮುಖಂಡರಾದ ಬಿ.ಉಮೇಶ್, ಟಿ.ಎಂ.ಗೋವಿಂದರಾಜು ಇತರರು ಇದ್ದರು
ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಎದುರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮುಖಂಡರಾದ ಬಿ.ಉಮೇಶ್, ಟಿ.ಎಂ.ಗೋವಿಂದರಾಜು ಇತರರು ಇದ್ದರು   

ತುಮಕೂರು: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್– ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕಾರ್ಮಿಕರ ಅಧಿಕಾರಿ ಮೂಲಕ ಪ್ರಧಾನಿ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್, ‘ಕಟ್ಟಡ ಕಾರ್ಮಿಕರು ಸೌಲಭ್ಯ ಪಡೆಯಲು ಒಂದಲ್ಲಾ ಒಂದು ದಾಖಲೆ ನೀಡುವಂತೆ ಹೇಳಿ, ಸಮಯ ದೂಡಲಾಗುತ್ತಿದೆ. ತಕ್ಷಣ ಕೋವಿಡ್ ಬಾಕಿ ಪರಿಹಾರದ ಹಣ ನೀಡಬೇಕು, ಕಾರ್ಮಿಕರ ಸೌಲಭ್ಯಗಳ ಹಣವನ್ನು ಖಾತೆಗೆ ಹಾಕಬೇಕು. 2020-21ನೇ ಸಾಲಿನ ಶೈಕ್ಷಣಿಕ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರದ ತಪ್ಪು ನೀತಿಗಳಿಂದಾಗಿ ರೈತರು, ಕಾರ್ಮಿಕರನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ. ಕೃಷಿಯ ನಂತರ ಹೆಚ್ಚು ಉದ್ಯೋಗ ನೀಡಿರುವ ನಿರ್ಮಾಣ ವಲಯವು ಬೆಲೆ ಏರಿಕೆ, ಉದ್ಯೋಗ ನಷ್ಟ, ಆದಾಯ ಕುಂಠಿತದಿಂದ ಹಿನ್ನಡೆ ಕಂಡಿದೆ. ತಕ್ಷಣ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು, ಮುಖಂಡ ಇಬ್ರಾಹಿಂ ಖಲೀಲ್, ‘ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಜತೆ ಕೋಳಿ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು’ ಎಂದು ಆಗ್ರಹಿಸಿದರು.

ಮುಖಂಡರಾದ ಆರ್.ರವೀಶ್, ಸಿದ್ದರಾಮಯ್ಯ, ಗಂಗಮ್ಮ, ಕಾಂತರಾಜು, ಕೆಂಪರಾಜು, ಅಣ್ಣಪ್ಪ, ಗಂಗಮ್ಮ, ಜಯಣ್ಣ, ಎಚ್‌.ರವೀಶ್, ಗಂಗಾಧರ್, ಜಯಣ್ಣ ಲಕ್ಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.