
ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ
ತುಮಕೂರು: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.
ವಾಹನ ಬಿಡುಗಡೆ ಮಾಡಲು ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ₹40 ಸಾವಿರ ಹಣವನ್ನು ಕ್ಯಾತ್ಸಂದ್ರ ಬಳಿಯ ಹೋಟೆಲ್ ಸಿಬ್ಬಂದಿಯೊಬ್ಬರಿಗೆ ನೀಡುವಂತೆ ವಾಹನ ಮಾಲೀಕರಿಗೆ ಚೇತನ್ ತಿಳಿಸಿದ್ದರು. ಈ ಕುರಿತು ವಾಹನ ಮಾಲೀಕರು ಲೋಕಾಯುಕ್ತ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಶುಕ್ರವಾರ ರಾತ್ರಿ ಕ್ಯಾತ್ಸಂದ್ರದ ಹೋಟೆಲ್ ಸಿಬ್ಬಂದಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಿಎಸ್ಐ ಚೇತನ್ ಬಗ್ಗೆ ಹೇಳಿದ್ದಾರೆ. ಶನಿವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ಚೇತನ್ ಅವರನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.