ತುಮಕೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದಾಖಲಾತಿ ಪ್ರಮಾಣ ಪಾತಾಳ ತಲುಪಿದ್ದು, ಕಳೆದ ಮೂರು–ನಾಲ್ಕು ವರ್ಷಗಳ ಅಂತರದಲ್ಲಿ ಅರ್ಧದಷ್ಟು ಕುಸಿತ ಕಂಡಿದೆ.
ನಗರದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು, ಎಂಪ್ರೆಸ್ ಬಾಲಕಿಯರ ಕಾಲೇಜು ಸೇರಿ ಎರಡು ಪದವಿ ಪೂರ್ವ ಕಾಲೇಜುಗಳಿವೆ. ಎರಡೂ ಕಡೆಗಳಲ್ಲಿ ದಾಖಲಾತಿ ಮೂರಂಕಿಗೆ ಇಳಿದಿದೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಸಾಗಿದೆ. ಪ್ರವೇಶಾತಿ ಹೆಚ್ಚಳಕ್ಕೆ ಹಲವು ಕ್ರಮ ಕೈಗೊಂಡರೂ ಯಾವುದೂ ಸಾಕಾರವಾಗುತ್ತಿಲ್ಲ.
ಎರಡು ಕಾಲೇಜುಗಳಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿವೆ. ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ತಲಾ ಮೂರು, ವಿಜ್ಞಾನದಲ್ಲಿ 2 ಕೋರ್ಸ್ ಪ್ರವೇಶಕ್ಕೆ ಅವಕಾಶವಿದೆ. ಜೂನಿಯರ್ ಕಾಲೇಜಿಗೆ 2021–22ರಲ್ಲಿ 1,833 ಮಕ್ಕಳು ದಾಖಲಾಗಿದ್ದರೆ, 2024–25ರ ವೇಳೆಗೆ 740ಕ್ಕೆ ಇಳಿಕೆಯಾಗಿದೆ. ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ಇತರೆ ಕಾಲೇಜು ಕಡೆ ಮುಖಮಾಡಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಈವರೆಗೆ ಜೂನಿಯರ್ ಕಾಲೇಜಿಗೆ 646, ಎಂಪ್ರೆಸ್‌ನಲ್ಲಿ 700 ಮಂದಿ ದಾಖಲಾಗಿದ್ದಾರೆ.
ಎಂಪ್ರೆಸ್ ಕಾಲೇಜಿನಲ್ಲಿ ಕೋವಿಡ್ ಸಮಯದಲ್ಲಿ ದಾಖಲಾತಿ ಸಂಖ್ಯೆ 1 ಸಾವಿರ ದಾಟಿತ್ತು. ನಂತರ ವರ್ಷಗಳಲ್ಲಿ ಕಡಿಮೆಯಾಗುತ್ತಲೇ ಬಂದಿದೆ.
ಕಟ್ಟಡ, ಪ್ರಯೋಗಾಲಯ, ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಲವರು ಖಾಸಗಿ ಸಂಸ್ಥೆಗಳ ಕಡೆಗೆ ಒಲವು ತೋರುತ್ತಿದ್ದಾರೆ. ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ಪ್ರವೇಶಾತಿ ಕುಸಿತಕ್ಕೆ ಇದೂ ಪ್ರಮುಖ ಕಾರಣವಾಗಿದೆ. ಎಂಪ್ರೆಸ್ ಕಾಲೇಜಿನಲ್ಲಿ ಇಂದಿಗೂ 6 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ.
ತೊಟ್ಟಿಕ್ಕುವ ಕಟ್ಟಡ: ಎರಡೂ ಪಿಯು ಕಾಲೇಜುಗಳು ಶತಮಾನ ಕಂಡಿವೆ. ಜೂನಿಯರ್ ಕಾಲೇಜು ಕಟ್ಟಡ 1900ರಲ್ಲಿ, ಎಂಪ್ರೆಸ್ ಕಾಲೇಜು ಕಟ್ಟಡ 1922–23ರಲ್ಲಿ ನಿರ್ಮಿಸಲಾಗಿದೆ. ಪಾರಂಪರಿಕ ಕಟ್ಟಡ ಉಳಿವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರಿದಂತೆ ಕಾಣುತ್ತಿಲ್ಲ. ಒಂದು ಸಣ್ಣ ಮಳೆ ಸುರಿದರೂ ಕಟ್ಟಡಗಳು ತೊಟ್ಟಿಕ್ಕುತ್ತವೆ. ಸುಣ್ಣ–ಬಣ್ಣ ಕಾಣದೆ ಕಳೆಗುಂದಿವೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆ, ತುಮಕೂರು ಅಕ್ಕಪಕ್ಕದ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿನ ವಿದ್ಯಾರ್ಥಿಗಳು ಜೂನಿಯರ್ ಕಾಲೇಜಿನಲ್ಲಿ ಅಭ್ಯಾಸ ನಡೆಸುತ್ತಾರೆ. ಸಿದ್ಧಗಂಗಾ ಮಠದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಹೆಚ್ಚಿನ ಮಕ್ಕಳು ಇದೇ ಕಾಲೇಜು ಸೇರುತ್ತಾರೆ. ಸದ್ಯ ಪ್ರಸ್ತುತ 42 ಕೊಠಡಿಗಳಿವೆ. ಭೌತಶಾಸ್ತ್ರ, ರಸಾಯನಶಾಸ್ತ್ರ ವಿಭಾಗ ಸೇರಿದಂತೆ ಒಟ್ಟು 9 ಪ್ರಯೋಗಾಲಯದ ವ್ಯವಸ್ಥೆ ಇದೆ.
‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೆ, ಅಗತ್ಯ ಸೌಲಭ್ಯಗಳೇ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಯೋಗಾಲಯಗಳಿಲ್ಲ. ಕೊಠಡಿಗಳ ಸಮಸ್ಯೆಯೂ ಇದೆ. ಮೂಲಭೂತ ಸೌಕರ್ಯ ಕಲ್ಪಿಸಿ, ಜನರಲ್ಲಿ ಅರಿವು ಮೂಡಿಸಿದರೆ ಕಾಲೇಜಿನ ದಾಖಲಾತಿ ಹೆಚ್ಚಿಸಬಹುದು’ ಎಂದು ಜೂನಿಯರ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.
ವರವಾದ ಕೋವಿಡ್
ಕೋವಿಡ್ ಸಮಯದಲ್ಲಿ ಎಲ್ಲರೂ ಊರು ಸೇರಿದ್ದರು. ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಹತ್ತಿರದ ಶಾಲಾ–ಕಾಲೇಜಿಗೆ ದಾಖಲಿಸಿದ್ದರು. ಈ ಸಮಯದಲ್ಲಿ ಪಿಯು ದಾಖಲಾತಿಯೂ ಸುಧಾರಿಸಿತ್ತು. 2022–23ರಲ್ಲಿ ಎಂಪ್ರೆಸ್ ಕಾಲೇಜಿಗೆ 1,300 ಮಂದಿ ಪ್ರವೇಶ ಪಡೆದಿದ್ದರು. ಅಲ್ಲಿಂದ ಇದುವರೆಗೆ ಮತ್ತೆ ಈ ಸಂಖ್ಯೆ ತಲುಪಲು ಸಾಧ್ಯವಾಗಿಲ್ಲ.
ಜೂನಿಯರ್ ಕಾಲೇಜಿನಲ್ಲೂ 2021–22ರಲ್ಲಿ 1,833 ಮಂದಿ ಹೊಸ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತಿದ್ದರು. ನಂತರದ ಯಾವುದೇ ವರ್ಷದಲ್ಲೂ ಅಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.