ADVERTISEMENT

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:49 IST
Last Updated 31 ಜುಲೈ 2025, 7:49 IST
ಗುಬ್ಬಿ ತಾಲ್ಲೂಕು ಅಂಕಸಂದ್ರ ಸರ್ಕಾರಿ ಶಾಲೆ ಶೈಕ್ಷಣಿಕ ಸಂಘಗಳ ಉದ್ಘಾಟಿಸಲಾಯಿತು
ಗುಬ್ಬಿ ತಾಲ್ಲೂಕು ಅಂಕಸಂದ್ರ ಸರ್ಕಾರಿ ಶಾಲೆ ಶೈಕ್ಷಣಿಕ ಸಂಘಗಳ ಉದ್ಘಾಟಿಸಲಾಯಿತು   

ಗುಬ್ಬಿ: ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮಾತೃಭಾಷೆ ಜೊತೆಗೆ ಇತರ ಭಾಷೆಗಳನ್ನು ಕಲಿಯಲು ಅನುವು ಮಾಡಿಕೊಟ್ಟಲ್ಲಿ ಭವಿಷ್ಯದ ದಿನಗಳಲ್ಲಿ ಅನುಕೂಲವಾಗುವುದು ಎಂದು ನಿವೃತ್ತ ಪ್ರಾಂಶುಪಾಲ ರೇವಣಸಿದ್ದಯ್ಯ ತಿಳಿಸಿದರು.

ತಾಲ್ಲೂಕಿನ ಚೇಳೂರು ಹೋಬಳಿ ಅಂಕಸಂದ್ರ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿರಂತರ ಪರಿಶ್ರಮದಿಂದ ಮಾತ್ರ ಕಲಿಕೆಯಲ್ಲಿ ಸಾಧನೆ ಸಾಧ್ಯ. ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಕಬ್ಬಿಣದ ಕಡಲೆ ಎಂಬ ಮನಸ್ಥಿತಿ ಇದೆ. ಅಂತಹ ಭಾವನೆ ಬದಿಗೊತ್ತಿ ಸರಿಯಾದ ಮಾರ್ಗದರ್ಶನ ನೀಡಿ ಅರಿವು ಮೂಡಿಸಿದಲ್ಲಿ ಮಾತೃಭಾಷೆಯಂತೆ ಇಂಗ್ಲಿಷ್‌ ಕಲಿತು ಮಾತನಾಡಲು ಸಾಧ್ಯ ಎಂದು ಹೇಳಿದರು.

ADVERTISEMENT

ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದ್ದು, ಪೋಷಕರು ನಿರಂತರವಾಗಿ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿರಬೇಕು. ಶಿಕ್ಷಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಸಣ್ಣಪುಟ್ಟ ಕೊರತೆಗಳನ್ನು ಹೊರತುಪಡಿಸಿದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲು ಗ್ರಾಮದ ಶಾಲೆಗೆ ದಾಖಲಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಮಕ್ಕಳು ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದು ಓದಿನಲ್ಲಿ ಗಮನಹರಿಸಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವುದನ್ನು ಮಕ್ಕಳು ಅರಿಯಬೇಕಿದೆ ಎಂದು ತಿಳಿಸಿದರು.

ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಜೊತೆಗೆ ಶಾಲಾ ಸಂಸತ್ತಿಗೆ ಆಯ್ಕೆಯಾಗಿದ್ದ ಮಕ್ಕಳಿಗೆ ಪ್ರಮಾಣವಚನ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ರಮೇಶ, ಶಿಕ್ಷಕರಾದ ಎಸ್ ಕೃಷ್ಣಪ್ಪ, ದೊಡ್ಡಯ್ಯ, ಕವಿತಾ, ವಿಜಯಕುಮಾರ್, ಎಚ್‌.ವಿ. ಸತ್ಯನಾರಾಯಣ, ಜಿ.ಆರ್. ಸೌಭಾಗ್ಯ, ನಾಗರತ್ನ, ಉಮಾರಾಣಿ, ಲತಾ, ಪ್ರಾಥಮಿಕ ಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ತುಕಾರಾಮಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.