ADVERTISEMENT

ರಾಗಿ ಬಿತ್ತನೆ ಬೀಜಕ್ಕೆ ಪರದಾಟ

ಹಿಂದಿನ ವರ್ಷಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ರಾಗಿ ಬಿತ್ತನೆ ಕಾರ್ಯ ಶುರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:07 IST
Last Updated 15 ಜುಲೈ 2020, 17:07 IST
ರಾಗಿ
ರಾಗಿ   

ತುಮಕೂರು: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಆರಂಭವಾಗಿದೆ. ಆದರೆ, ರಾಗಿ ಬಿತ್ತನೆ ಬೀಜ ಸಿಗದೆ ರೈತರು ಪರದಾಡುತ್ತಿದ್ದಾರೆ.

ಸಕಾಲಕ್ಕೆ ಮಳೆಯಾಗಿರುವುದರಿಂದ ಹಿಂದಿನ ವರ್ಷಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ರಾಗಿ ಬಿತ್ತನೆಗೆ ಮುಂದಾಗಿದ್ದಾರೆ. ಜುಲೈ ತಿಂಗಳ ಮೊದಲು– ಎರಡನೇ ವಾರದಲ್ಲಿ ರಾಗಿ ಬಿತ್ತನೆ ಮಾಡಿದರೆ ಮುಂದೆ ಉತ್ತಮ ಇಳುವರಿ ಬರುತ್ತದೆ ಎಂಬ ಉತ್ಸಾಹದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಆರ್ ತಳಿಯ ರಾಗಿ ಬಿತ್ತನೆ ಮಾಡಿದರೆ ಇಳುವರಿಯ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಸಿಗುತ್ತದೆ. ಎಂಆರ್ ತಳಿಯ ರಾಗಿ ಬಿತ್ತನೆ ಬೀಜ ಸಿಗದೆ ರೈತ ಸಂಪರ್ಕ ಕೇಂದ್ರಗಳಿಗೆ ಎಡತಾಕುವಂತಾಗಿದೆ.

ಎಲ್ಲೆಡೆ ಎಂಎಲ್ ತಳಿಯ ಬಿತ್ತನೆ ಬೀಜ ಸಿಗುತ್ತಿದೆ. ಈ ತಳಿಯನ್ನು ಬಿತ್ತನೆ ಮಾಡಿದರೆ ಎಂಆರ್ ತಳಿಗಿಂತ ಎರಡು ವಾರ ಬೇಗನೆ ಕೂಯ್ಲಿಗೆ ಬರುತ್ತದೆ. ಇಳುವರಿಯೂ ಚೆನ್ನಾಗಿದೆ. ಆದರೆ, ಹುಲ್ಲು ಸಾಕಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ. ಈಗ ರೈತರಿಗೆ ರಾಗಿ ಜತೆಗೆ ಜಾನುವಾರುಗಳಿಗೆ ಹುಲ್ಲು ಸಹ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಎಂಆರ್ ತಳಿಯ ಬೀಜಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಷ್ಟು ಬಿತ್ತನೆ ಬೀಜ ಸಿಗದಾಗಿದೆ.

ADVERTISEMENT

‘ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಎಂಆರ್ ತಳಿಯ ರಾಗಿ ಬಿತ್ತನೆ ಬೀಜ ಸಿಗುತ್ತಿದೆ. ಅಗತ್ಯದಷ್ಟು ದಾಸ್ತಾನು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಖಾಲಿಯಾಗಿದೆ.

ರೈತ ಸಂಪರ್ಕ ಕೇಂದ್ರಕ್ಕೆ ರೈತರು ಕರೆಮಾಡಿ, ಎಂಆರ್ ತಳಿಯ ರಾಗಿ ಸಿಗುವುದೆ ಎಂದು ಪ್ರಶ್ನಿಸಿದರೆ ‘ಇದೆ, ಬನ್ನಿ’ ಎಂಬ ಉತ್ತರ ಬರುತ್ತದೆ. ಕೇಂದ್ರಕ್ಕೆ ಹೋದರೆ ಇನ್ನೂ ದಾಸ್ತಾನು ಬಂದಿಲ್ಲ. ಸದ್ಯಕ್ಕೆ ಬೇಕಾದರೆ ಎಂಎಲ್ ತಳಿ ಇದೆ. ಅದನ್ನೇ ತೆಗೆದುಕೊಂಡುಹೋಗಿ ಎಂದು ಹೇಳುತ್ತಿದ್ದಾರೆ. ಇನ್ನೂ ಸ್ವಲ್ಪ ಜೋರಾಗಿ ಕೇಳಿದರೆ ಕರ್ನಾಟಕ ಬೀಜ ನಿಗಮದ ಅಧಿಕಾರಿಗಳನ್ನು ಕೇಳಿ. ಅವರು ಕೊಟ್ಟಿದ್ದನ್ನು ನಾವು ಮಾರಾಟ ಮಾಡುತ್ತಿದ್ದೇವೆ ಎಂಬ ಉತ್ತರ ಬರುತ್ತದೆ.

‘ರಾಗಿ ಬಿತ್ತನೆಗೆ ಸಮಯ ಮೀರುತ್ತಿದ್ದರೆ ಅಥವಾ ತಡವಾಗಿದ್ದರೆ ಎಂಎಲ್ ತಳಿಯನ್ನೇ ಬಿತ್ತನೆ ಮಾಡುತ್ತಿದ್ದರು. ಈಗ ಸ್ವಲ್ಪ ಸಮಯಾವಕಾಶ ಇರುವುದರಿಂದ ಎಂಆರ್ ತಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಿ ವಿತರಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಸಹಜ ಬೇಸಾಯ ಶಾಲೆಯ ಮಂಜುನಾಥ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.