ADVERTISEMENT

ತುಮಕೂರು ನಗರದ ಜನರಿಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:48 IST
Last Updated 9 ಏಪ್ರಿಲ್ 2019, 14:48 IST

ತುಮಕೂರು: ನಗರದ ನಾಗರಿಕರಿಗೆ ಮಂಗಳವಾರ ರಾತ್ರಿಯೂ ಮಳೆ ತಂಪೆರೆಯಿತು. ಸೋಮವಾರ ಮಧ್ಯಾಹ್ನ ಸೋನೆ ಮಳೆ ಸುರಿದಿತ್ತು. ಇದು ಜನರನ್ನು ಒಂದಿಷ್ಟು ಉಲ್ಲಾಸಗೊಳಿಸಿತ್ತು. ಮಂಗಳವಾರ ಸಂಜೆ ಮೋಡ ಕಟ್ಟಿದ ವಾತಾವರಣ ನಗರದಲ್ಲಿ ಇತ್ತು. 8 ಗಂಟೆ ಸುಮಾರಿನಲ್ಲಿ ಕೆಲವು ಕ್ಷಣ ಜೋರಾದ ಮಳೆಯೇ ಸುರಿಯಿತು.

ಗುಡುಗಿನೊಂದಿಗೆ ಆರಂಭವಾದ ಮಳೆ ವಾತಾವರಣವನ್ನು ತಂಪುಗೊಳಿಸಿತು. ಸಿಡಿಲು ಸಹ ಬಡಿಯಿತು. ಆದರೆ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಂಜೆ ಜನರು ಮಳೆಯ ಲಕ್ಷಣಗಳು ಕಂಡ ತಕ್ಷಣ ಮನೆ ಸೇರುವ ಧಾವಂತದಲ್ಲಿ ಇದ್ದರು. ಮಳೆ ಬಿದ್ದ ತಕ್ಷಣ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ಬದಿಯ ಅಂಗಡಿಗಳ ಬಳಿ ಹಾಗೂ ಮಳಿಗೆಗಳ ಬಳಿ ಆಶ್ರಯ ಪಡೆದರು.

ತೀವ್ರ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಈ ರಾತ್ರಿ ಮಳೆ ಸಂತಸವನ್ನು ತಂದಿತು. ಮಳೆ ಸುರಿದ ಕಾರಣ ಮಣ್ಣಿನ ಘಮಲು ಹೆಚ್ಚಿತ್ತು. ಬೇಸಿಗೆಯ ಈ ದಿನಗಳಲ್ಲಿ ಮಳೆ ಸುರಿಯುತ್ತಿರುವುದು ಉತ್ತಮವಾಗಿದೆ ಎಂದು ನಾಗರಿಕರು ಖುಷಿಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.