ADVERTISEMENT

ಸಂತಸ ಮೂಡಿಸಿದ ಉತ್ತರಾ ಮಳೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 12:39 IST
Last Updated 24 ಸೆಪ್ಟೆಂಬರ್ 2019, 12:39 IST
ಶಿರಾ ತಾಲ್ಲೂಕಿನ ಬಸರಿಹಳ್ಳಿ ಗ್ರಾಮದ ಬಳಿ ಹರಿಯುತ್ತಿರುವ ಹಳ್ಳ
ಶಿರಾ ತಾಲ್ಲೂಕಿನ ಬಸರಿಹಳ್ಳಿ ಗ್ರಾಮದ ಬಳಿ ಹರಿಯುತ್ತಿರುವ ಹಳ್ಳ   

ಶಿರಾ: ಉತ್ತರಾ ಮಳೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೋಮವಾರ ರಾತ್ರಿ ಉತ್ತಮವಾಗಿ ಬಂದಿದ್ದು, ಜನರಲ್ಲಿ ಸಂತಸ ಮೂಡಿಸಿದೆ.

ತಾಲ್ಲೂಕಿನಲ್ಲಿ ಮಳೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಕುಡಿಯುವ ನೀರಿಗು ಸಹ ಸಂಕಷ್ಟ ಪಡುವಂತಾಗಿತ್ತು. ಜಾನುವಾರುಗಳಿಗೆ ಮೇವಿಲ್ಲದೆ ರೈತರ ಗೋಳು ಕೇಳುವರಿಲ್ಲದಂತಾಗಿತ್ತು. ಈ ಸಮಯದಲ್ಲಿ ಮಳೆ ಬಂದಿರುವುದು ಒಂದು ರೀತಿಯಲ್ಲಿ ಆಸರೆಯಾಗಿದೆ.

ಮಳೆಯಿಲ್ಲದೆ ಕೆಲವು ಕಡೆ ರೈತರು ಬಿತ್ತನೆಯನ್ನು ಸಹ ಮಾಡಲು ಸಾಧ್ಯವಾಗಿರಲಿಲ್ಲ. ಬಿತ್ತನೆ ಮಾಡಿದ್ದ ಬೆಳೆ ಸಹ ಮಳೆಯಿಲ್ಲದೆ ಒಣಗುತ್ತಿತ್ತು. ಗುಣಿ, ಗುದ್ದರಗಳಿಗೆ ನೀರು ಬಂದಿರುವುದರಿಂದ ಕುರಿ, ಮೇಕೆ ಸೇರಿದಂತೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುವುದು.

ADVERTISEMENT

ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹಳ್ಳಗಳು ಹರಿಯುತ್ತಿದ್ದು, ಜಮೀನು ಮತ್ತು ತೋಟಗಳಲ್ಲಿ ನೀರು ನಿಂತಿದೆ. ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿದು ಬರುತ್ತಿದ್ದು, ಈಗ ಮಳೆ ಸಹ ಬಂದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕಳ್ಳಂಬೆಳ್ಳ ಕೆರೆಗೆ ನೀರು ಹರಿದು ಬರುವ ಹಳ್ಳದಲ್ಲಿ ಮಲ್ಲಶೆಟ್ಟಿಹಳ್ಳಿ ಬಳಿ ನಿರ್ಮಿಸಿರುವ ಪಿಕಪ್‌ ತುಂಬಿ ಹರಿಯುತ್ತಿದ್ದು, ನೋಡುಗರ ಮನ ಸೆಳೆಯುತ್ತಿದೆ.

ಕುರುಡನಹಳ್ಳಿ ಬಳಿ ನಿರ್ಮಿಸಿರುವ ಚೆಕ್ ಡ್ಯಾಂ ಅರ್ಧವಾಗಿದ್ದರೆ, ವೀರಗಾನಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಪಿಕಪ್‌ ಭರ್ತಿಯಾಗಿದ್ದು, ಬಹುತೇಕ ಪಿಕಪ್‌ಗಳಿಗೆ ನೀರು ಬಂದಿದೆ.

ತಾಲ್ಲೂಕಿನ ರಾಗಲಹಳ್ಳಿ, ಕಲ್ಲಹಳ್ಳಿ, ಅರಿಹಜ್ಜಿಹಳ್ಳಿ, ಕೆರೆಯಾಗಲಹಳ್ಳಿ, ನಾದೂರು, ಕಾಮಗೊಂಡನಹಳ್ಳಿ, ಬರಗೂರು, ಬೇವಿನಹಳ್ಳಿ, ಕಳ್ಳಂಬೆಳ್ಳ ಸೇರಿದಂತೆ ಬಹುತೇಕ ಎಲ್ಲ ಭಾಗದಲ್ಲಿ ಮಳೆಯಾಗಿದೆ. ಸೋಮವಾರ ಜಿಟಿಜಿಟಿ ಮಳೆಯಾದರೆ ರಾತ್ರಿ ಜೋರಾಗಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.