ತುಮಕೂರು: ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಬರ ಕಾಡಿದ್ದರೂ, ಅಕ್ಟೋಬರ್ ಒಂದೇ ತಿಂಗಳಲ್ಲಿ ದುಪ್ಪಟ್ಟು ಮಳೆಯಾಗಿರುವುದು ರೈತರ ಮುಖದಲ್ಲಿ ನೆಮ್ಮದಿ ತರಿಸಿದೆ. ಕಳೆದ ನಾಲ್ಕು ದಿನಗಳಿಂದ ಬಿಡುವು ನೀಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ.
ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕೈಕೊಟ್ಟಿದ್ದು ನೋಡಿದರೆ ಮತ್ತೊಮ್ಮೆ ‘ಹಸಿರು ಬರ’ ಬಂತು ಎಂಬ ಭಾವನೆ ಮೂಡಿತ್ತು. ಶೇಂಗಾ ಕಾಯಿಕಟ್ಟುವ ಸಮಯದಲ್ಲಿ, ರಾಗಿ ತೆನೆಯೊಡೆಯುವ ಹೊತ್ತಿಗೆ ವರುಣನ ಕಣ್ಣಾಮುಚ್ಚಾಲೆ ಮುಂದುವರಿದಿತ್ತು. ಕಳೆದ ತಿಂಗಳು ಬಹುತೇಕ ಕಡೆಗಳಲ್ಲಿ ಬೆಳೆಗಳು ಒಣಗಲಾರಂಭಿಸಿದ್ದವು. ಅಷ್ಟರಲ್ಲಿ ಮಳೆರಾಯ ಕಣ್ಣು ಬಿಟ್ಟಿದ್ದು, ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೆರೆಗಳು ಭರ್ತಿ: ಮಳೆ ಹಾಗೂ ಗೊರೂರು ಜಲಾಶಯದಿಂದ (ಹೇಮಾವತಿ) ನಿರಂತರವಾಗಿ ನೀರು ಹರಿಸಿದ ಪರಿಣಾಮವಾಗಿ ಬಹುತೇಕ ಕೆರೆಗಳು, ಸಣ್ಣ ಪ್ರಮಾಣದ ಜಲಾಶಯಗಳು ಭರ್ತಿಯಾಗಿವೆ. ಮಳೆ ಆಶ್ರಯದ ಕೆಲವೆಡೆಗಳಲ್ಲಿ ಮಾತ್ರ ಇನ್ನೂ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಈ ತಿಂಗಳಲ್ಲಿ ನಿರಂತರವಾಗಿ ಮಳೆ ಸುರಿದಿದ್ದು, ಅಂತರ್ಜಲದ ಮಟ್ಟ ಹೆಚ್ಚಳವಾಗಿದೆ. ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹರಿಯುವ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದವು. ಒಂದು ಸಾವಿರ ಅಡಿ ಕೊರೆದು ನೀರಿಲ್ಲದೆ ಮುಚ್ಚಿದ್ದ ಕೊಳವೆಯಲ್ಲೂ ನೀರು ಚುಮ್ಮಿದೆ. ಕೊನೆಗೂ ಬರ ತಪ್ಪಿತು, ಆದರೆ ಒಂದೇ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದು, ಬೆಳೆಗೂ ಹಾನಿ ಮಾಡಿದೆ.
ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿ ವಾಡಿಕೆ 145 ಮಿ.ಮೀ ಮಳೆ ಆಗಬೇಕಿದ್ದು, ಕೇವಲ 75 ಮಿ.ಮೀ ಬಿದ್ದಿತ್ತು. ಕೊರಟಗೆರೆ ತಾಲ್ಲೂಕಿನಲ್ಲಿ 156 ಮಿ.ಮೀ ಸುರಿದಿತ್ತು. ಅದು ಬಿಟ್ಟರೆ ಬಹುತೇಕ ತಾಲ್ಲೂಕುಗಳು ಬರ ಎದುರಿಸಿದ್ದವು. ಸರಾಸರಿಗಿಂತ ಅರ್ಧದಷ್ಟು ಬಿದ್ದಿರಲಿಲ್ಲ. ಮತ್ತೊಮ್ಮೆ ಬರ ಎದುರಿಸಬೇಕಾದ ಆತಂಕದಲ್ಲಿ ಇದ್ದವರಿಗೆ ಅಕ್ಟೋಬರ್‌ನಲ್ಲಿ ನಿರಂತರವಾಗಿ ಸುರಿದಿದ್ದು, ಬೆಳೆ ಚೇತರಿಸುವಂತೆ ಮಾಡಿದೆ. ಕಳೆದ ತಿಂಗಳು ಒಂದೆರಡು ಬಾರಿ ಮಳೆಯಾಗಿದ್ದರೆ ಇಳುವರಿ ಮತ್ತಷ್ಟು ಹೆಚ್ಚುತಿತ್ತು. ಸೆಪ್ಟೆಂಬರ್‌ನಲ್ಲಿ ಒಣಗಿದ ಬೆಳೆ ಹಾಗೂ ಅಕ್ಟೋಬರ್‌ನಲ್ಲಿ ಬಿದ್ದ ಅತಿಯಾದ ಮಳೆಯಿಂದಾಗಿ ನಿರೀಕ್ಷೆಗಿಂತ ಇಳುವರಿ ಪ್ರಮಾಣ ತಗ್ಗಲಿದೆ ಎಂದು ರೈತರು ಅಂದಾಜಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಈವರೆಗೆ 121 ಮಿ.ಮೀ ಮಳೆಯಾಗಬೇಕಿದ್ದು, 271 ಮಿ.ಮೀ (ಶೇ 123ರಷ್ಟು ಹೆಚ್ಚು) ಬಿದ್ದಿದೆ. ಈ ವರ್ಷದ ಮುಂಗಾರಿನಲ್ಲಿ ಜೂನ್– ಸೆಪ್ಟೆಂಬರ್ ನಡುವೆ 358 ಮಿ.ಮೀ ಬೀಳಬೇಕಿದ್ದು, 491 ಮಿ.ಮೀ (ಶೇ 37ರಷ್ಟು ಅಧಿಕ) ಸುರಿದಿದೆ. ಜಿಲ್ಲೆಯಲ್ಲಿ ಜನವರಿ– ಅಕ್ಟೋಬರ್ ವರೆಗೆ 604 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 951 ಮಿ.ಮೀ (ಶೇ 57ರಷ್ಟು ಹೆಚ್ಚು) ಮಳೆಯಾಗಿದೆ. ಇಡೀ ವರ್ಷ ಬಿದ್ದ ಮಳೆ ಪ್ರಮಾಣವನ್ನು ಲೆಕ್ಕ ಹಾಕಿದರೆ ವಾಡಿಕೆಗಿಂತ ಶೇ 57ರಷ್ಟು ಹೆಚ್ಚು ಸುರಿದಿದೆ. ಅದರಲ್ಲೂ ಅಕ್ಟೋಬರ್ ಒಂದೇ ತಿಂಗಳಲ್ಲಿ 271 ಮಿ.ಮೀ ಬಿದ್ದಿರುವುದು ಒಟ್ಟಾರೆ ಮಳೆ ಪ್ರಮಾಣ ಹೆಚ್ಚಳವಾಗುವಂತೆ ಮಾಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಬಿಡುವು: ಕಳೆದ ನಾಲ್ಕು ದಿನಗಳಿಂದ ವರುಣ ಬಿಡುವು ಕೊಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ನೆರವಾಗಿದೆ. ಮುಂಗಾರಿನ ಆರಂಭದಲ್ಲೇ ಬಿತ್ತನೆ ಮಾಡಿದ್ದ ರಾಗಿ ಕೂಯ್ಲಿಗೆ ಬಂದಿದೆ. ಶೇಂಗಾ ಒಕ್ಕಣಿ ಸಹ ಆರಂಭವಾಗಿದೆ. ಈ ತಿಂಗಳಲ್ಲಿ ಬಿದ್ದ ಮಳೆಯಿಂದ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ನೆರವಾಗಿದೆ. ಮುಂದಿನ ಬೇಸಿಗೆಯಲ್ಲೂ ತೋಟಗಾರಿಕೆ ಬೆಳೆಗಳಿಗೆ ತೇವಾಂಶದ ಸಮಸ್ಯೆ ಆಗುವುದಿಲ್ಲ ಎಂದು ರೈತ ಸುಂದರೇಶ್ ಹೇಳುತ್ತಾರೆ.
ತಾಲ್ಲೂಕು;ವಾಡಿಕೆ;ಬಿದ್ದ ಮಳೆ;ಶೇ
ಚಿ.ನಾ.ಹಳ್ಳಿ;145;209;45
ಗುಬ್ಬಿ;145;277;91
ಕೊರಟಗೆರೆ;124;275;121
ಕುಣಿಗಲ್;134;268;99
ಮಧುಗಿರಿ;129;289;124
ಪಾವಗಡ;113;268;136
ಶಿರಾ;114;268;134
ತಿಪಟೂರು;153;287;87
ತುಮಕೂರು;121;298;145
ತುರುವೇಕೆರೆ;146;281;92
ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಯಿಂದ ಬೆಳೆ ಹಾನಿಯಾಗಿದ್ದು ಅ. 29ರಂದು ಸಮೀಕ್ಷೆ ನಡೆಯಲಿದೆ. ಕೃಷಿ ತೋಟಗಾರಿಕೆ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಮುಂಗಾರು ಹಂಗಾಮಿನಲ್ಲಿ 108.72 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಶೇಂಗಾ ಭತ್ತ ಮುಸುಕಿನ ಜೋಳ ಹತ್ತಿ ಹಾಗೂ ಇತರೆ ಬೆಳೆ ಬೆಳೆಯಲಾಗಿದೆ. ಈವರೆಗೆ 93.68 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.