ADVERTISEMENT

ಗೂಳೂರು ಗಣೇಶ ಜಾತ್ರೆ ಮೂದೂಡಿಕೆ

ಮಳೆ ಕಾರಣ; ಡಿ.14, 15ರಂದು ಜಾತ್ರೋತ್ಸವ; ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:10 IST
Last Updated 1 ಡಿಸೆಂಬರ್ 2019, 13:10 IST
ಗೂಳೂರು ಗಣೇಶನ ಮೂರ್ತಿಯನ್ನು ದೇವಾಲಯದ ಗೋಪುರದ ಅಡಿ ಕೂರಿಸಲಾಗಿದೆ
ಗೂಳೂರು ಗಣೇಶನ ಮೂರ್ತಿಯನ್ನು ದೇವಾಲಯದ ಗೋಪುರದ ಅಡಿ ಕೂರಿಸಲಾಗಿದೆ   

ತುಮಕೂರು: ಶನಿವಾರ ರಾತ್ರಿ ಸುರಿದ ಮಳೆ ಕಾರಣದಿಂದಾಗಿ ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ಜಾತ್ರೆಯನ್ನು ಡಿ. 14 ಮತ್ತು 15ಕ್ಕೆ ಮುಂದೂಡಲಾಗಿದೆ.

ಕಳೆದ ಬಲಿಪಾಡ್ಯಮಿಯಂದು ಗೂಳೂರು ಗಣೇಶನನ್ನು ಪ್ರತಿಷ್ಠಾಪಿಸಿ ನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ನ.30 ಮತ್ತು ಡಿ. 1ರಂದು ಗಣೇಶ ಜಾತ್ರೆ ನಡೆಸಲು ದಿನ ನಿಗದಿಯಾಗಿತ್ತು. ನಿಗದಿಯಂತೆ ರಾತ್ರಿ 10 ಗಂಟೆ ನಂತರ 18 ಕೋಮಿನ ಜನರ ಸಹಕಾರದೊಂದಿಗೆ ಗಣೇಶಮೂರ್ತಿಯನ್ನು ದೇವಾಲಯದ ಹೊಸ್ತಿಲು ದಾಟಿಸಿ ಹೊರಗೆ ತಂದು ಗೋಪುರದಲ್ಲಿ ಕೂರಿಸಲಾಗಿತ್ತು.

ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸುರಿದ ಮಳೆ ಮತ್ತು ಭಾನುವಾರ ಸಹ ಮೋಡ ಕವಿದ ವಾತಾವರಣ ಮುಂದುವರಿದಿರುವುದರಿಂದ ಜಾತ್ರೆ ಸುಗಮವಾಗಿ ನಡೆಯಲು ಅಡಚಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ 18 ಕೋಮಿನ ಜನರು ಮತ್ತು ಗ್ರಾಮಸ್ಥರು ಸಭೆ ಸೇರಿ ಜಾತ್ರೆಯನ್ನು ಡಿ. 14, 15ರಂದು ನಡೆಸಲು ತೀರ್ಮಾನಿಸಿದರು.

ADVERTISEMENT

ದೇವಾಲಯದ ಗೋಪುರದ ಅಡಿ ಕೂರಿಸಲಾಗಿರುವ ಗಣೇಶಮೂರ್ತಿಗೆ ಕಿರೀಟ ಧಾರಣೆ ಮಾಡಿ ಇನ್ನು ಎರಡು ವಾರ ಅಲ್ಲಿಯೇ ಪೂಜೆ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲು ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

ಡಿ. 14ರಂದು ರಾತ್ರಿ ಗಣೇಶಮೂರ್ತಿಯನ್ನು ದೇವಾಲಯದ ಗೋಪುರದಿಂದ ರಥಕ್ಕೆ ಕೂರಿಸಿ ಇಡೀ ರಾತ್ರಿ ಆಕರ್ಷದ ಸಿಡಿಮದ್ದಿನ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಲಾಗುವುದು. 15ರಂದು ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗಣೇಶಮೂರ್ತಿಯನ್ನು ವಿಸರ್ಜಿಸಲು ತೀರ್ಮಾನಿಸಲಾಗಿದೆ.

ಹಾಗೆಯೇ ಡಿ. 16ರಂದು ಬೆಳಿಗ್ಗೆ 11ಕ್ಕೆ ಜಾತ್ರೆಯ ನಂತರ ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿಯಿಂದ ‘ಕುರುಕ್ಷೇತ್ರ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಮಳೆ ಹಿನ್ನೆಲೆಯಲ್ಲಿ ಜಾತ್ರೆಯನ್ನು ಮುಂದೂಡಿರುವುದರಿಂದ ಭಕ್ತರು ಳು ಸಹಕರಿಸಬೇಕು ಎಂದು ಗೂಳೂರು ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಎಸ್.ಶಿವಕುಮಾರ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.