ತುಮಕೂರು/ಮೈಸೂರು/ಕಲಬುರಗಿ: ರಾಜ್ಯದ ವಿವಿಧೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಧಾರಾಕಾರ ಮಳೆಯಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ಬಳಿಯ ಬಿ.ಆರ್. ಗುಂಡ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಬಾಲಕ ಹನುಮಗೌಡ ನಾಯಕ (16) ಮೃತಪಟ್ಟಿದ್ದಾನೆ. ಕೊಡಗು ಜಿಲ್ಲೆಗೆ ಭಾರತೀಯ ಹವಾಮಾನ ಇಲಾಖೆ ಮೇ 20ರಂದು ಅತಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ.
ವಿರಾಜಪೇಟೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಸಾಧಾರಣ ಮಳೆ ಸುರಿದಿದೆ. ಮಡಿಕೇರಿಯ ಕೆಲವೆಡೆ ತುಂತುರು ಮಳೆಯಾಗಿದೆ. ಮೈಸೂರು ಮತ್ತು ಹಾಸನ ಜಿಲ್ಲೆಯಲ್ಲಿ ಕೆಲವೆಡೆ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಜಿಟಿ ಜಿಟಿ ಮಳೆಯಾಗಿದ್ದು, ಹಿರೀಸಾವೆ ಹೋಬಳಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಮೈಸೂರು ನಗರ, ಹೊರವಲಯದ ಗ್ರಾಮಗಳಲ್ಲಿ, ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ, ನುಗ್ಗೇಹಳ್ಳಿ, ಬಾಗೂರು ಹೋಬಳಿಯಲ್ಲಿ ಮಳೆಯಾಗಿದೆ.
ತುಮಕೂರು ಜಿಲ್ಲೆಯ ವಿವಿಧ ಕಡೆ ಉತ್ತಮ ಮಳೆ ಸುರಿಯಿತು. ಸೋಮವಾರ ಬೆಳಗಿನ ಜಾವದಿಂದಲೇ ತುಂತುರು ಮಳೆ ಶುರುವಾಯಿತು. ಬೆಳಗ್ಗೆ 10 ಗಂಟೆಯ ತನಕ ನಿರಂತರವಾಗಿ ಸುರಿಯಿತು. ಇಡೀ ದಿನ ಮೋಡ ಕವಿದ ವಾತಾವರಣ ಇತ್ತು.
ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕೃಷಿ ಕೆಲಸಗಳು ಬಿರುಸು ಪಡೆದಿವೆ. ಪೂರ್ವ ಮುಂಗಾರಿನಲ್ಲಿ ಹೆಸರು, ಅಲಸಂದೆ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ತುಮಕೂರು ತಾಲ್ಲೂಕಿನ ಕೋರ ಹೋಬಳಿಯ ಮುದ್ದರಾಮಯ್ಯನ ಪಾಳ್ಯದಲ್ಲಿ ರಂಗಮಣಿ ಎಂಬುವರಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಮನೆಯ ಗೋಡೆ, ಛಾವಣಿ ನೆಲಕ್ಕುರುಳಿವೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ.
ಆನೇಕಲ್ ತಾಲೂಕಿನಾದ್ಯಂತ ಮಧ್ಯಾಹ್ನ 3ಕ್ಕೆ ಸುರಿಯಲು ಆರಂಭವಾದ ಮಳೆ ಸಂಜೆ ಏಳು ಗಂಟೆಯಾದರೂ ಒಂದೇ ಸಮನೆ ಸುರಿಯುತ್ತಿತ್ತು. ರಸ್ತೆಗಳಲ್ಲಿ ಮೊಳಕಾಲುವರೆಗೂ ಮಳೆ ನೀರು ನಿಂತಿತ್ತು. ಇದರಿಂದ ರಸ್ತೆಗಳೆಲ್ಲ ಹೊಳೆಯಂತಾಗಿದ್ದವು.
ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಾಲ್ಕು ಕಿಲೋ ಮೀಟರಿಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ತೋಟಗಳಿಗೆ ಮಳೆ ನೀರು ನುಗ್ಗಿದೆ. ಫಸಲಿಗೆ ಬಂದ ಹೂವು, ತರಕಾರಿ ಸೇರಿ ಬೆಳೆಗಳಿಗೆ ಹಾನಿಯಾಗಿದೆ. ಹೊಸಕೋಟೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಮಂಗಳೂರು ವರದಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಮುಂಜಾನೆಯಿಂದಲೇ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಕೆಲವೆಡೆ ದಟ್ಟ ಮೋಡಗಳು ಆವರಿಸಿ ತುಂತುರು ಮಳೆಯಾಯಿತು. ಮಂಗಳೂರು ನಗರದಲ್ಲಿ ಸಂಜೆಯವರೆಗೆ ಬಿಟ್ಟುಬಿಟ್ಟು ಮಳೆಯಾಗಿದೆ. ಬಂಟ್ವಾಳ, ಅಡ್ಯಾರು ಮುಂತಾದ ಪ್ರದೇಶಗಳಲ್ಲಿ ಸಾಮಾನ್ಯದಿಂದ ಭಾರಿ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲೂ ಹಗಲಿಡೀ ಮೋಡ ಕವಿದ ವಾತಾವರಣವಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಾಧಾರಣ ಮಳೆಯಾಗಿದೆ. ಉಡುಪಿ ನಗರ ವ್ಯಾಪ್ತಿಯ ಕೆಲವೆಡೆ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸವಾರರಿಗೆ ಸಮಸ್ಯೆಯಾಯಿತು. ಕುಂದಾಪುರ, ಬ್ರಹ್ಮಾವರ, ಕಾಪು, ಹೆಬ್ರಿ, ಕಾರ್ಕಳ ವ್ಯಾಪ್ತಿಯಲ್ಲೂ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಸಾಮಾನ್ಯ ಮಳೆಯಾಗಿದೆ.
ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಸುಮಾರು ಎರಡು ಗಂಟೆ ಕಾಲ ಭಾರಿ ಮಳೆಯಾಗಿದೆ. ಲಿಂಗಸುಗೂರು ತಾಲ್ಲೂಕಿನ ಜಾಂತಾಪೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ 10.8 ಸೆಂ.ಮೀ ಮಳೆಯಾಗಿದೆ. ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಸಿಡಿಲು ಬಡಿದು ದೇವಸ್ಥಾನದ ಶಿಖರಕ್ಕೆ ಹಾನಿಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಗಂಗಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭತ್ತದ ಸಸಿಗಳಿಗೆ ಹಾನಿಯಾಗಿವೆ.
ಎರಡು ತಿಂಗಳಲ್ಲಿ ಭತ್ತದ ನಾಟಿ ಮಾಡಲಿದ್ದು, ಅದಕ್ಕೆ ಸಸಿಗಳನ್ನು ಬೆಳೆಸಿಕೊಳ್ಳುವ ಕಾರ್ಯ ನಡೆದಿತ್ತು. ಕೊಪ್ಪಳ, ಕುಷ್ಟಗಿ, ಕನಕಗಿರಿ, ಕುಕನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದೆ.
ಬೀದರ್ ಜಿಲ್ಲೆಯಲ್ಲಿ ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದೆ. ಸಿಡಿಲಿಗೆ ಔರಾದ್ ತಾಲ್ಲೂಕಿನಲ್ಲಿ ಎತ್ತು ಮೃತಪಟ್ಟಿದೆ. ಔರಾದ್, ಸಂತಪೂರ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ. ಹುಲಸೂರು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲೂ ವರ್ಷಧಾರೆಯಾಗಿದೆ. ಬೀದರ್, ಭಾಲ್ಕಿಯಲ್ಲೂ ಗುಡುಗು ಸಹಿತ ಮಳೆಯಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ, ಸುರಪುರ ತಾಲ್ಲೂಕಿನಲ್ಲಿ ಭಾನುವಾರ ತಡರಾತ್ರಿ ಉತ್ತಮವಾಗಿ ಮಳೆಯಾಗಿದೆ.
ಮಳೆಗೆ ತುಂಬಿದ ಬ್ಯಾರೇಜ್; ಮನೆಗಳಿಗೆ ಹಾನಿ
ಹುಬ್ಬಳ್ಳಿ ವರದಿ: ಬಳ್ಳಾರಿ ವಿಜಯನಗರ ವಿಜಯಪುರ ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹೊನ್ನಾವರದಲ್ಲಿ ಬಿರುಸಿನ ಮಳೆ ಮತ್ತು ಕುಮಟಾ ಶಿರಸಿಯಲ್ಲಿ ತುಂತುರು ಮಳೆ ಆಗಿದೆ.
‘ಮೇ 23ರವರೆಗೆ ಕರಾವಳಿ ಭಾಗದಲ್ಲಿ ಪ್ರತಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ವೇಳೆ ಮೀನುಗಾರಿಕೆ ನಡೆಸಬಾರದು’ ಎಂದು ಕೇಂದ್ರ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಹುನಗುಂದ ಅಮೀನಗಡ ಮತ್ತು ಕರಡಿ ಹೋಬಳಿಗಳ ವ್ಯಾಪ್ತಿಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆವರೆಗೆ 4.1 ಸೆಂ.ಮೀ ಮಳೆಯಾಗಿದೆ. ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿವೆ. ಹುನಗುಂದ ಸಾರ್ವಜನಿಕ ಆಸ್ಪತ್ರೆ ಕೊಠಡಿಗಳಿಗೂ ಮಳೆ ನೀರು ನುಗ್ಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಿಂದ ಹಳ್ಳಕೊಳ್ಳಗಳು ತುಂಬತೊಡಗಿವೆ. ಮಳೆಗೆ ಕಂಪ್ಲಿ ತಾಲ್ಲೂಕಿನಲ್ಲಿ ಏಳು ಮನೆಗಳಿಗೆ ಹಾನಿ ಆಗಿದೆ. ಹೊಸಪೇಟೆ ತಾಲ್ಲೂಕಿನ ಎರಡು ಮನೆಗಳಿಗೆ ಹಾನಿಯಾಗಿದ್ದು ಐದು ಪರಿವರ್ತಕಗಳು ಸುಟ್ಟಿವೆ.
ಎಂಟು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪದ ಜೋಳ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಿದ್ದ ಜೋಳ ಮಳೆಯಲ್ಲಿ ನೆನೆದು ಚೀಲದಲ್ಲೇ ಮೊಳಕೆಯೊಡೆದಿದೆ. ನಾಲ್ಕೈದು ದಿನ ನಿರಂತರ ಸುರಿದ ಮಳೆಯಿಂದ ಸುಮಾರು 250ಕ್ಕೂ ಹೆಚ್ಚು ಚೀಲದಲ್ಲಿ ಜೋಳ ಮೊಳಕೆಯೊಡೆದಿದೆ. ಕನಿಷ್ಠ 12 ಟನ್ ಜೋಳ ಹಾನಿಯಾದ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.