ADVERTISEMENT

ರಾಮಮಂದಿರ ಶಿಲಾನ್ಯಾಸ: ಜಿಲ್ಲೆಯಲ್ಲೂ ಸಂಭ್ರಮಾಚರಣೆ

ವಿವಿಧ ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಮನೆಗಳಲ್ಲಿ ರಾಮಜಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 13:55 IST
Last Updated 4 ಆಗಸ್ಟ್ 2020, 13:55 IST

ತುಮಕೂರು: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಆ. 5ರಂದು ನೆರವೇರುವ ಕಾರಣ ಜಿಲ್ಲೆಯಲ್ಲೂಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ರಾಮಮಂದಿರ ನಿರ್ಮಾಣಕ್ಕೆ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರ, ಸಿದ್ಧಗಂಗಾ ಮಠ, ದೇವರಾಯನದುರ್ಗದ ಮುತ್ತಿಕೆ (ಮಣ್ಣು) ಮತ್ತು ನಾಮದ ಚಿಲುಮೆಯ ಗಂಗಾಜಲವನ್ನು ಕಳುಹಿಸಿಕೊಡಲಾಗಿದೆ.

ಬುಧವಾರ ಶಿಲಾನ್ಯಾಸದ ಸಡಗರಕ್ಕಾಗಿ ಜನರು ತಮ್ಮ ಮನೆಗಳಿಗೆ ತೋರಣ ಕಟ್ಟಿ, ರಂಗೋಲಿ ಹಾಕಿ, ಭಗವದ್‌ ಧ್ವಜ ಹಾರಿಸುವ ಮೂಲಕ ಐತಿಹಾಸಿಕ ಕಾರ್ಯಕ್ರಮದ ಸಂಭ್ರಮದಲ್ಲಿ ಭಾಗಿಯಾಗುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮನವಿ ಮಾಡಿದೆ.

ADVERTISEMENT

ಬೆಳಿಗ್ಗೆ ಸ್ನಾನಮಾಡಿ ತಮ್ಮ ಇಷ್ಟ ದೇವತೆಯ ಮುಂದೆ ಕುಳಿತು 108 ಬಾರಿ ರಾಮನ ಜಪ ಹಾಗೂ 11.30ಕ್ಕೆ ಕುಟುಂಬಸ್ಥರೆಲ್ಲರೂ ಸೇರಿ ಸಾಮೂಹಿಕ ಜಪ, ಸಾಯಂಕಾಲ ರಾಮನ ಫೋಟೋ ಇಟ್ಟು ದೀಪ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಲು ಸಿದ್ಧರಾಗಿದ್ದಾರೆ. ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಲಿದೆ.

ನಗರದ ಕೆ.ಆರ್.ಬಡಾವಣೆ ರಸ್ತೆಯ ರಾಮಮಂದಿರ, ನಾಗರಕಟ್ಟೆ ಸಮೀಪದ ರಾಮಮಂದಿರ, ಮಾರುತಿನಗರ, ಸಿಎಸ್‌ಐ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್, ಬಜರಂಗದಳದ ಮಂಜು ಭಾರ್ಗವ್ ತಿಳಿಸಿದರು.

ಬಿಜೆಪಿ ಮುಖಂಡರು, ವಾರ್ಡ್‌ ಸದಸ್ಯರು ತಮ್ಮ ಭಾಗಗಳಲ್ಲಿ ಸಂಭ್ರಮಾಚರಣೆ ನಡೆಸಲು ಸಿದ್ದರಾಗಿದ್ದಾರೆ. ಅಂಗಡಿ ಮಾಲೀಕರಿಗೂ ಸಹ ತಮ್ಮ ಅಂಗಡಿಗಳ ಮುಂದೆ ರಾಮನ ಫೋಟೋ ಇಟ್ಟು, ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವಂತೆ ತಿಳಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಬುಧವಾರ ಮೆರವಣಿಗೆ, ರ‍್ಯಾಲಿ ನಡೆಸಲು ಅವಕಾಶವಿಲ್ಲ. ಯಾವುದೇ ಧರ್ಮ, ಸಮುದಾಯದ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆ, ಘೋಷಣೆಗಳನ್ನು ಕೂಗುವುದಕ್ಕೆ ಅವಕಾಶವಿಲ್ಲ. ನಗರದಲ್ಲಿ ರಾಮನ ಚಿತ್ರ ಅಥವಾ ಬ್ಯಾನರ್, ಬಂಟಿಂಗ್ಸ್‌ ಅಳವಡಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.