ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ತೊರೆಹಳ್ಳಿಯಲ್ಲಿ ಭಾನುವಾರ ರಾಮಪ್ಪದೇವರ ಜಾತ್ರೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಅರ್ಚಕರು ರಾಮಪ್ಪಸ್ವಾಮಿ ಮುಖವಾಡ ಹೊತ್ತು, ಅರೇವಾದ್ಯ, ಚಿಟ್ಟೆಮೇಳ, ಕೊಂಬು, ಕಹಳೆಯೊಂದಿಗೆ ಗ್ರಾಮಸ್ಥರು ಊರ ಮುಂದೆ ಜಾಲಿ ಮುಳ್ಳನ್ನು ಸುರಿದು ಸಿದ್ಧಪಡಿಸಿದ್ದ ಮುಳ್ಳಿನ ಹಾಸಿಗೆಯ ಬಳಿ ಬಂದು ಕುಣಿಸಲಾಯಿತು. ಮುಳ್ಳಿನ ಹಾಸಿಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮಪ್ಪಸ್ವಾಮಿ ಮುಖವಾಡ ಹೊತ್ತಿದ್ದ ಅರ್ಚಕರು ಕುಣಿದು ಮುಳ್ಳಿನ ಹಾಸಿಗೆಯ ಮೇಲೆ ಚಾಟಿ ಬೀಸುತ್ತಾ ಬೀಳುವ ಮೂಲಕ ಸಂಪ್ರದಾಯವನ್ನು ನೆರವೇರಿಸಲಾಯಿತು.
ರಾಮಪ್ಪ ಸ್ವಾಮಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಜೆ ಮತ್ತಿಘಟ್ಟಕ್ಕೆ ಕೊಂಡಯ್ಯಲಾಯಿತು. ಭಾನುವಾರ ರಾತ್ರಿ ಅಲ್ಲಿಯೇ ಇರುವ ದೇವರು ಸೋಮವಾರ ತೊರೆಹಳ್ಳಿಗೆ ಹಿಂತಿರುಗಿ ಬಂದು ಮತ್ತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ನಂತರ ಜಾತ್ರೆಯನ್ನು ಸಂಪನ್ನಗೊಳಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.