ADVERTISEMENT

ಜನಪದ ಕಲಾವಿದರಿಗೆ ಪಡಿತರ ಕಿಟ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:13 IST
Last Updated 1 ಜುಲೈ 2021, 4:13 IST
ತುಮಕೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜನಪದ ಕಲಾವಿದರಿಗೆ ಪಡಿತರ ಕಿಟ್ ವಿತರಿಸಲಾಯಿತು
ತುಮಕೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜನಪದ ಕಲಾವಿದರಿಗೆ ಪಡಿತರ ಕಿಟ್ ವಿತರಿಸಲಾಯಿತು   

ತುಮಕೂರು: ಮೂಲ ಸಂಸ್ಕೃತಿಯ ವಾರಸುದಾರರಾದ ಜನಪದ ಕಲಾವಿದರಿಗೆ ನೀಡುವ ಗೌರವ, ಮಾತೃ ಋಣದ ಪ್ರತೀಕ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಅಭಿಪ್ರಾಯಪಟ್ಟರು.

ನಗರದ ಇಂದಿರಾ ವಿದ್ಯಾಸಂಸ್ಥೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಅಶಕ್ತ ಜನಪದ ಕಲಾವಿದರಿಗೆ ಪಡಿತರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕೊರೊನಾ ಸಂಕಷ್ಟದ ಕಾಲದಲ್ಲಿ ಆರ್ಥಿಕ ಪರಿಸ್ಥಿತಿ ಮನುಷ್ಯನ ಜೀವನದ ಮೇಲೆ ಅಗಾಧ ಪರಿಣಾಮ ಬೀರಿದೆ. ಜೀವನ ನಡೆಸುವುದು ದುಸ್ತರ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಕಲಾವಿದರ ನೆರವಿಗೆ ಬರುವುದು ಮಾನವೀಯ ಕಾರ್ಯ ಎಂದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು, ‘ಕೊರೊನಾದಿಂದಾಗಿ ಕುಟುಂಬದೊಳಗೆ ಅಸ್ಪೃಶ್ಯತೆ ಕಾಡಿದೆ. ತಂದೆ– ಮಗನೇ ನೋಡಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ಕೊರೊನಾ ಮನುಷ್ಯನ ಅಹಂಕಾರಕ್ಕೆ ದೊಡ್ಡ ಸವಾಲಾಗಿದ್ದು, ನಮ್ಮೆಲ್ಲ ಪ್ರಗತಿ, ನಾಗರಿಕತೆಯ ಮದವನ್ನು ಏಕಕಾಲಕ್ಕೆ ಅಡಗಿಸಿದೆ. ಈ ಮೂಲಕ ನಮ್ಮೊಳಗಣ ನಿಜವಾದ ಅಸ್ಪೃಶ್ಯತೆಗೆ ಕಾರಣವಾಗಿದೆ. ದುಡಿದು ಬದುಕುವ ಕಾಯಕ ಯೋಗಿಗಳ ಬದುಕು ಜರ್ಜರಿತವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಚಿಕ್ಕಣ್ಣ ಯಣೆಕಟ್ಟೆ, ‘ಕಲಾವಿದರು ಇಂದಿಗೂ ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ 71 ಕಲಾವಿದರಿಗೆ ಆಹಾರ ಕಿಟ್ ನೀಡುವ ಅವಕಾಶವನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಒದಗಿಸಿ ಕೊಟ್ಟಿದ್ದಾರೆ’ ಎಂದರು.

ಇಂದಿರಾ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಪ್ರೊ.ರೀಟಾ ಶಿವಮೂರ್ತಿ, ಜಾನಪದ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ವೆಂಕಟೇಶ್, ಕೋಶಾಧ್ಯಕ್ಷ ಸಿ.ಸುಧೀರ್‌ಮೂರ್ತಿ ಇದ್ದರು. ಮಾಗಡಿಪಾಳ್ಯ ಸೋಬಾನೆ ರಾಮಯ್ಯ, ಮುಖವೀಣೆ ಮೂಡಲಗಿರಿಯಪ್ಪ, ದಿಬ್ಬದಹಳ್ಳಿ ಭಾಗವತ ರಂಗಪ್ಪ ಜಾನಪದ ಗೀತೆ ಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.