ಗುಬ್ಬಿ: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಪಟ್ಟಣದಲ್ಲಿ ಬುಧವಾರ ಸಭೆ ನಡೆಸಿ 31ರಂದು ತಾಲ್ಲೂಕಿನ ಸುಂಕಾಪುರದ ಬಳಿ ಪ್ರತಿಭಟನೆ ನಡೆಸುವ ಕುರಿತು ಚರ್ಚಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರೈತ ಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಲಿಂಕ್ ಕೆನಾಲ್ ನಿರ್ಮಾಣದಿಂದ ಜಿಲ್ಲೆಗೆ ಅದರಲ್ಲೂ ಗುಬ್ಬಿ ತಾಲ್ಲೂಕಿಗೆ ಮರಣ ಶಾಸನವಾಗಲಿದೆ. ಲಿಂಕ್ ಕೆನಾಲ್ ವಿರೋಧಿ ಪ್ರತಿಭಟನೆಗೆ ರೈತರು ಎಲ್ಲ ರಾಜಕೀಯ ಮುಖಂಡರು ತಾರತಮ್ಯ ಬದಿಗೊತ್ತಿ ತಾಲ್ಲೂಕಿನ ಹಿತಾಸಕ್ತಿಗಾಗಿ ಪಾಲ್ಗೊಳ್ಳಬೇಕು ಎಂದರು.
ಮುಖಂಡ ಬಿ.ಎಫ್. ನಾಗರಾಜು ಮಾತನಾಡಿ, ತಾಲ್ಲೂಕಿನ ಜನ ‘ಮಾಡು ಇಲ್ಲವೇ ಮಡಿ’ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಪೊಲೀಸರು ಬಂಧಿಸುವರು ಎಂಬ ಆತಂಕ ಬಿಟ್ಟು ರೈತರು ಹಾಗೂ ತಾಲ್ಲೂಕಿನ ಜನತೆ ಅಪಾರ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಬೇಕು ಎಂದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ತಾಲ್ಲೂಕಿನ ರೈತರು ಹೋರಾಟದ ಕಿಚ್ಚು ರೂಢಿಸಿಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬಾರಿ ಬೆಲೆ ತರಬೇಕಾಗುತ್ತದೆ. ಯಾವ ನಾಯಕರು ಬರಲಿ ಬರದಿರಲಿ ನಮಗಾಗಿ ನಾವು ಹೋರಾಟ ಮಾಡಬೇಕಿದೆ ಎಂದರು.
ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಹೇಮಾವತಿ ನಾಲೆಯ ನೀರಿನಲ್ಲಿ ಬದುಕು ಕಂಡುಕೊಂಡಿರುವ ತಾಲ್ಲೂಕಿನ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ವೈ.ಕೆ. ರಾಮಯ್ಯ, ಹುಚ್ಚುಮಾಸ್ತಿಗೌಡ ಅವರ ಶ್ರಮದಿಂದ ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸಲಾಗಿದೆ. ಅದನ್ನು ಬೇರೆಯವರು ವಾಮಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.
ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಬ್ಯಾಟರಂಗೇಗೌಡ, ಸುರೇಶ್ ಗೌಡ, ಶಂಕರ್ ಕುಮಾರ್, ಯೋಗಾನಂದ ಕುಮಾರ್, ಕಾಡಶೆಟ್ಟಿಹಳ್ಳಿ ಸತೀಶ್, ಪಂಚಾಕ್ಷರಿ, ಭೈರಪ್ಪ, ರೈತ ಸಂಘದ ಲೋಕೇಶ್, ಪದಾಧಿಕಾರಿಗಳು, ರೈತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.