ADVERTISEMENT

ಭಿನ್ನ ಆಲೋಚನೆ ಉಳ್ಳ ನಿರಾಶ್ರಿತರು

ಕೋರಾದ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿವಿಯ ವಿದ್ಯಾರ್ಥಿಗಳು ಭೇಟಿ: ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 15:19 IST
Last Updated 31 ಜನವರಿ 2019, 15:19 IST
ಕಾರ್ಯಕ್ರಮದಲ್ಲಿ ನಿರಾಶ್ರಿತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ನಿರಾಶ್ರಿತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ತುಮಕೂರು: ನಿರಾಶ್ರಿತರಾಗಿ ಪರಿಹಾರ ಕೇಂದ್ರದಲ್ಲಿರುವವರು ಭಿನ್ನ ಆಲೋಚನೆ ಉಳ್ಳವರು. ಕೌಟುಂಬಿಕ ಆಶ್ರಯ ತಪ್ಪಿ, ಪ್ರೀತಿಯಿಂದ ವಂಚಿತರಾದವರು ಎಂದು ತುಮಕೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಅಭಿಪ್ರಾಯಪಟ್ಟರು.

ತುಮಕೂರು ತಾಲ್ಲೂಕಿನ ಕೋರಾ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಗುರುವಾರ ಭೇಟಿ ನೀಡಿದ್ದ ಶೈಕ್ಷಣಿಕ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಿಕ್ಷಾಟನೆಗೆ ತೊಡಗಿಕೊಂಡರೆ ಅದು ಅವರ ತಪ್ಪಲ್ಲ. ಸಮಾಜ ಹಾಗೂ ಕುಟುಂಬದಿಂದ ವಂಚಿತರಾಗಿ ಅವರು ಭಿಕ್ಷಾಟನೆಯಲ್ಲಿ ತೊಡಗಿ ಈ ಕೇಂದ್ರಕ್ಕೆ ಬಂದಿದ್ದಾರೆ. ಇವರು ಅನಾಥರಲ್ಲ. ಸಮಾಜ ಹಾಗೂ ಕುಟುಂಬ ಇವರನ್ನು ಅನಾಥರನ್ನಾಗಿ ಮಾಡಿದೆ ಎಂದರು.

ADVERTISEMENT

ಈ ಕೇಂದ್ರದಲ್ಲಿರುವವರು ಯಾರೂ ತಬ್ಬಲಿಗಳಲ್ಲ. ಒಬ್ಬೊಬ್ಬರು ಒಂದು ಕೃತಿ. ಇಂತಹ ಒಂದು ಜೀವಂತ ಕೃತಿಯನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಅವರಿಗೊಂಡು ನೆಲೆ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಿರಾಶ್ರಿತ ಪರಿಹಾರ ಕೇಂದ್ರದ ಅಧೀಕ್ಷಕ ಮಾರಪ್ಪ ಮಾತನಾಡಿ, ‘ಕೇಂದ್ರದಲ್ಲಿ ನಿರಾಶ್ರಿತರಿಗೆ ವಿವಿಧ ತರಬೇತಿ ನೀಡಲಾಗುತ್ತಿದೆ. ಭಿಕ್ಷಾಟನೆಗೆ ತೊಡಗದಂತೆ ಅವರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರುವಂತೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ನಿರಾಶ್ರಿತರು ಯಾವ ಕಾರಣಕ್ಕಾಗಿ ಮನೆ ತೊರೆದಿದ್ದಾರೆ. ಅವರ ಸಮಸ್ಯೆಗಳೇನು ಹಾಗೂ ಅವರ ಆಸಕ್ತಿಗಳನ್ನು ಸಂಗ್ರಹಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ಅವರನ್ನು ಫಲಾನುಭವಿಗಳನ್ನಾಗಿ ಮಾಡಲು ಅಧ್ಯಯನ ಮಾಡಲಾಗುತ್ತಿದೆ ಎಂದರು.

ನಂತರ ವಿದ್ಯಾರ್ಥಿಗಳು ನಿರಾಶ್ರಿತರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.