ADVERTISEMENT

ಆರೋಗ್ಯ ಇಲಾಖೆ ನಡೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 4:39 IST
Last Updated 4 ಜುಲೈ 2020, 4:39 IST

ಪಟ್ಟನಾಯಕನಹಳ್ಳಿ: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬರ ಗಂಟಲು ಸ್ರಾವವನ್ನು ತೆಗೆದುಕೊಂಡಿದ್ದೇವೆ. ಆತನನ್ನು ಪ್ರತ್ಯೇಕವಾಗಿ ಇರಿಸಿ ಎಂದು ಮುನ್ನೆಚ್ಚರಿಕೆ ನೀಡದ ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಈಗ ಹಲವು ಮಂದಿ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.

ಶಿರಾ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೂ.28ರಂದು ಕೊರೊನಾ ಪರೀಕ್ಷೆಗೆ ವಿದ್ಯಾರ್ಥಿಯ ಗಂಟಲು ಸ್ರಾವ ಮಾದರಿ ತೆಗೆದುಕೊಳ್ಳಲಾಗಿತ್ತು. ಆ ವಿದ್ಯಾರ್ಥಿ ಪಟ್ಟನಾಯಕನಹಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ.
ಈ ವೇಳೆಗೆ ಆತನಲ್ಲಿ ಸೋಂಕು ಇರುವುದು ದೃಢವಾಗಿತ್ತು. ಆದ
ಕಾರಣ 14 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ.

ವಿದ್ಯಾರ್ಥಿ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಶಾಲೆಯ ವಿದ್ಯಾರ್ಥಿಯಾಗಿದ್ದು ಮಠದ ಹಾಸ್ಟೆಲ್ ನಲ್ಲಿದ್ದ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿದಂತೆ 9 ಜನರನ್ನು ಪಟ್ಟನಾಯಕನಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ADVERTISEMENT

ಪ್ರತ್ಯೇಕ ಪರೀಕ್ಷೆ: ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 8ರಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ತಲಾ 8 ಮಂದಿಗೆ ಒಂದು ಕೊಠಡಿಯಂತೆ ಪ್ರತ್ಯೇಕವಾಗಿ ಶುಕ್ರವಾರ ಪರೀಕ್ಷೆ ಬರೆಸಲಾಯಿತು.

ವಿದ್ಯಾರ್ಥಿಗೆ ಕೊರೊನಾ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ್ದೇವೆ ಎಂದು ಮುಂಚೆಯೇ ಹೇಳಿದ್ದರೆ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿ ಕೂರಿಸಬಹುದಿತ್ತು. ಆದರೆ ಆರೋಗ್ಯ ಇಲಾಖೆಯವರು ಮಾಹಿತಿ ನೀಡಿಲ್ಲ ಎಂದು ಕ್ವಾರಂಟೈನ್‌ನಲ್ಲಿ ಇರುವವರು ದೂರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.