ADVERTISEMENT

ಸ್ಪಂದಿಸದ ಬೆಸ್ಕಾಂ: ಸಮೀಕ್ಷೆದಾರರ ಆರೋಪ

ಶೆಡ್, ದನದ ಕೊಟ್ಟಿಗೆಗೆ ಸ್ಟಿಕ್ಕರ್: ಶಿಕ್ಷಕರ ದೂರು– ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:07 IST
Last Updated 5 ಅಕ್ಟೋಬರ್ 2025, 7:07 IST
ಕುಣಿಗಲ್ ಪಟ್ಟಣದಲ್ಲಿ ಸಮೀಕ್ಷೆಗೆ ತೆರಳಿದ ಶಿಕ್ಷಕರು ಗೊಂದಲಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಕುಣಿಗಲ್ ಪಟ್ಟಣದಲ್ಲಿ ಸಮೀಕ್ಷೆಗೆ ತೆರಳಿದ ಶಿಕ್ಷಕರು ಗೊಂದಲಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಪ್ರಜಾವಾಣಿ ವಾರ್ತೆ

ಕುಣಿಗಲ್: ಬೆಸ್ಕಾಂ ಸಿಬ್ಬಂದಿ ಯಡವಟ್ಟಿನಿಂದಾಗಿ ಜಾತಿವಾರು ಸಮೀಕ್ಷೆಗೆ ಸರಿಯಾದ ಮನೆ ವಿಳಾಸ ಸಿಗುತ್ತಿಲ್ಲ ಎಂದು ಆರೋಪಿಸಿದ ಸಮೀಕ್ಷೆದಾರರು ಶನಿವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಪಟ್ಟಣದ ಕುವೆಂಪು ನಗರದಲ್ಲಿ ಸಮೀಕ್ಷೆಗೆ 20 ಶಿಕ್ಷಕರ ನಿಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಮನೆ ವಿಳಾಸ ಹುಡುಕಲಾಗದೆ, ಜಿಪಿಎಸ್ ಲೊಕೇಶನ್ ಹಾಕಿದರೆ ಅಂಚೆಪಾಳ್ಯ, ಊರಾಚೆ, ಮರದ ಕೆಳಗೆ ತೋರಿಸುತ್ತಿತ್ತು. ಇದರಿಂದ ಬೇಸತ್ತ ಶಿಕ್ಷಕರು ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಮೇಲ್ವಿಚಾರಕ ಮಹೇಶ್ ಬೆಸ್ಕಾಂ ಅದಿಕಾರಿಗಳೊಂದಿಗೆ ಚರ್ಚಿಸಿ ಶನಿವಾರ ಅಗತ್ಯ ಸಿಬ್ಬಂದಿ ಕಳಿಸುವ ಭರವಸೆ ನೀಡಿದ್ದರು.

ADVERTISEMENT

ಶನಿವಾರ ಬೆಳಿಗ್ಗೆ 20ಕ್ಕೂ ಹೆಚ್ಚು ಶಿಕ್ಷಕರು ಸಮೀಕ್ಷೆಗೆ ಬಂದಾಗ ಒಬ್ಬರೇ ಬೆಸ್ಕಾಂ ಸಿಬ್ಬಂದಿ ಇದ್ದು, ಸರಿಯಾದ ಮಾಹಿತಿ ಕೊಡಲು ವಿಫಲವಾದ ಕಾರಣ ಬೇಸತ್ತ ಶಿಕ್ಷಕರು ಎಸ್‌ಬಿಐ ಬ್ಯಾಂಕ್ ಬಳಿ ಜಮಾವಣೆಗೊಂಡು ಬೆಸ್ಕಾಂ ಸಿಬ್ಬಂದಿ ನಡೆ ಖಂಡಿಸಿ ಧರಣಿಗೆ ಮುಂದಾದರು.

ಮೇಲ್ವಿಚಾರಕ ಮಹೇಶ್ ಮಾತನಾಡಿ, ಬೆಸ್ಕಾಂ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಶೆಡ್, ದನದ ಕೊಟ್ಟಿಗೆಗೆ ಸ್ಟಿಕ್ಕರ್ ಹಾಕಿದ್ದಾರೆ. ಜಿಪಿಎಸ್ ವಿಳಾಸ ಹುಡುಕಲು ಹೋದರೆ ಮರದ ಕೆಳಗೆ, 8 ಕಿ.ಮಿ. ದೂರದ ಡಾಬಾ ತೋರಿಸುತ್ತದೆ. ಈ ಬಗ್ಗೆ ತಹಶೀಲ್ದಾರ್, ಬಿಇಒ ಸೇರಿದಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಬೆಸ್ಕಾಂ ಸಿಬ್ಬಂದಿ ಸ್ಪಂದಿಸಿಲ್ಲ ಎಂದು ಅರೋಪಿಸಿದರು.

ಸ್ಥಳದಲ್ಲಿದ್ದ ಬೆಸ್ಕಾಂ ಸಿಬ್ಬಂದಿ ಪ್ರಶಾಂತ್, ‘ಶಿಕ್ಷಕರು ಬರಿ ಆರ್‌ಆರ್‌ ನಂಬರ್‌ ಶೀಟ್ ತಂದಿದ್ದಾರೆ ಎನು ಮಾಡುವುದು? ನಾವು ಐದು ಸಾವಿರ ಮನೆಗೆ ರೀಡಿಂಗ್ ಮಾಡಿ ಬಿಲ್‌ ಕೊಡಬೇಕು. ಇತ್ತ ಶಿಕ್ಷಕರು ನಂಬರ್ ಕೊಟ್ಟು ವಿಳಾಸ ಕೇಳುತ್ತಾರೆ, ಇಲಾಖೆ ಮೇಲಧಿಕಾರಿಗಳು ವಿಳಾಸ, ಮೀಟರ್‌ ನಂಬರ್ ಶೀಟ್ ಕೊಟ್ಟರೆ ಮನೆ ತೋರಿಸಬಹುದು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೆಲಕಾಲ ವಾದ ವಿವಾದದ ನಂತರ ಹೆಚ್ಚುವರಿ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ಸಮೀಕ್ಷೆದಾರರ ಮನವೊಲಿಸಿ ಮನೆ ತೋರಿಸಲು ಮುಂದಾಗಿದ್ದು, ಸಮಸ್ಯೆ ತಿಳಿಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.