ADVERTISEMENT

ಚಿಕ್ಕನಾಯಕನಹಳ್ಳಿ: ಸೋರುವ ಕಟ್ಟಡದಲ್ಲಿ ವಸತಿ ಶಾಲೆ ಮಕ್ಕಳು

ಮತ್ತೆ, ಮತ್ತೆ ಕೆಟ್ಟು ಹೋಗುವ ಕೊಳವೆಬಾವಿ ಪಂಪ್‌ಸೆಟ್‌ ದುರಸ್ತಿಗೆ ಸಾಲುತ್ತಿಲ್ಲ ಅನುದಾನ

ಪ್ರಜಾವಾಣಿ ವಿಶೇಷ
Published 14 ಜೂನ್ 2023, 1:11 IST
Last Updated 14 ಜೂನ್ 2023, 1:11 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ   

– ನಾಗೇಂದ್ರಪ್ಪ ಕೆ.ಎನ್‌.

ಚಿಕ್ಕನಾಯಕನಹಳ್ಳಿ: ಅನುದಾನದ ಕೊರತೆ, ನಿರ್ವಹಣೆಯ ವೈಫಲ್ಯದಿಂದಾಗಿ ತಾಲ್ಲೂಕಿನ ಮೇಲನಹಳ್ಳಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ.

ಶಾಲೆಯ ಕಟ್ಟಡಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ಹಲವು ವರ್ಷಗಳೇ ಕಳೆದಿವೆ. ಬೋಧನಾ ಕೊಠಡಿ, ಹಾಸ್ಟೆಲ್‌ ಕೊಠಡಿ, ಡೈನಿಂಗ್‌ ಹಾಲ್‌, ಶೌಚಾಲಯ, ಸ್ನಾನದ ಗೃಹ ಎಲ್ಲವುಗಳಲ್ಲಿ ನೀರು ತೊಟ್ಟಿಕ್ಕುತ್ತಿದೆ.

ADVERTISEMENT

ಮಳೆ ನಿಂತರು ಹನಿ ನಿಲ್ಲದು ಎನ್ನುವಂತೆ ಕಟ್ಟಡದಲ್ಲಿ ಬಹುದಿನದವರೆಗೂ ನೀರು ಸೋರುತ್ತಲೇ ಇರುತ್ತದೆ. ಅಷ್ಟೊತ್ತಿಗೆ ಇನ್ನೊಂದು ಮಳೆ ಸುರಿದರೆ ಸಮಸ್ಯೆ ಪುನರಾವರ್ತನೆಯಾಗುತ್ತದೆ. ಮಳೆಗಾಲ ಮುಗಿಯುವ ತನಕ ವಿದ್ಯಾರ್ಥಿಗಳ ಗೋಳು ತಪ್ಪುವುದೇ ಇಲ್ಲ.

₹4.5 ಕೋಟಿ ವೆಚ್ಚದಲ್ಲಿ 2011ರಲ್ಲಿ ನಿರ್ಮಾಣಗೊಂಡ ಕಟ್ಟಡವಾದರೂ ಈಗಾಗಲೇ ದುಸ್ಥಿತಿ ತಲುಪಿದೆ. ಗೋಡೆಗಳ ಮಧ್ಯದಲ್ಲೇ ನೀರು ಜಿನುಗಿ ಕೆಳ ಮಹಡಿವರೆಗೂ ವ್ಯಾಪಿಸುತ್ತಿದೆ.

ಕಟ್ಟಡದಲ್ಲಿ ಸಮಸ್ಯೆ ಶುರುವಾದಾಗಿನಿಂದಲೂ ದುರಸ್ತಿಗೆ ಪ್ರತಿವರ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದರೂ, ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಶಾಲೆಯಲ್ಲಿ ಬಾಲಕ, ಬಾಲಕಿಯರ ನಿವಾಸಕ್ಕೆ ತಲಾ 10 ಕೊಠಡಿ, ತಲಾ 12 ಶೌಚ, ಸ್ನಾನ ಗೃಹಗಳಿವೆ ಎಲ್ಲವುಗಳದ್ದೂ ಇದೇ ಸಮಸ್ಯೆ. ವಿಪರೀತವಾಗಿ ಸೋರುವ ಎರಡು ಕೊಠಡಿಗಳ ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ.

ಬಿಸಿನೀರಿನ ವ್ಯವಸ್ಥೆಗೆ ಕಟ್ಟಡದ ಮೇಲೆ ಅಳವಡಿಸಿದ್ದ ಸೋಲಾರ್‌ ಉಪಕರಣಗಳು ಹಾಳಾಗಿ ಹಲವು ವರ್ಷ ಕಳೆದಿದ್ದರೂ ಸರಿಪಡಿಸಿಲ್ಲ. ನಿರ್ವಹಣಾ ವೆಚ್ಚಕ್ಕೆಂದು ವಾರ್ಷಿಕ ₹1 ಲಕ್ಷ ಅನುದಾನ ಬರುತ್ತದೆಯಾದರೂ, ಮತ್ತೆ, ಮತ್ತೆ ಕೆಟ್ಟು ಹೋಗುವ ಕೊಳವೆಬಾವಿ ಪಂಪ್‌ಸೆಟ್‌ ದುರಸ್ತಿಗೆ ಆ ಹಣ ಸಾಕಾಗುವುದಿಲ್ಲ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಗಿಲ ದುಸ್ಥಿತಿ
ವಸತಿ ಗೃಹ ಸಮಸ್ಯೆ:
ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ 13 ವಸತಿಗೃಹಗಳಿರಬೇಕಿತ್ತು. ಆದರೆ, ಅಲ್ಲಿ ನಿರ್ಮಿಸಿರುವುದು 6 ಮಾತ್ರ. ಅವೂ ಸೋರುತ್ತವೆ ಎನ್ನುತ್ತಾರೆ ಶಿಕ್ಷಕರು. ಮುಖ್ಯ ರಸ್ತೆಯಿಂದ ವಸತಿ ಶಾಲೆವರೆಗೂ ರಸ್ತೆ ಸರಿಯಾಗಿಲ್ಲ. ಅಲ್ಲಿ ಡಾಂಬರ್‌ ರಸ್ತೆ ನಿರ್ಮಿಸಬೇಕು ಎಂಬ ಒತ್ತಾಯವಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯಲ್ಲಿ ಮಳೆ ನೀರು ಸೋರಿ ಗೋಡೆ ಹಾಳಾಗಿದೆ
ಬಹುತೇಕ ಶಾಲೆಗಳಲ್ಲಿ ಸಮಸ್ಯೆ
ಅನುದಾನದ ಕೊರತೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಗಳ ನಿರ್ವಹಣೆ ದುಸ್ಥಿತಿ ತಲುಪಿವೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಗಳಿಂದ ಅಗತ್ಯ ಅನುದಾನ ದೊರೆತು ಆಯಾ ವಸತಿ ಶಾಲೆಗಳ ಕಟ್ಟಡ ನಿರ್ವಹಣೆಯಲ್ಲಿ ಸಮಸ್ಯೆಯಾಗಿಲ್ಲ. ಆದರೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಸಂಘಕ್ಕೆ ಅನುದಾನ ಬಿಡುಗಡೆಯಾಗದೆ ಆ ವರ್ಗದ ಜಿಲ್ಲೆಯ 9 ಸೇರಿ ರಾಜ್ಯದ ಹಲವು ಶಾಲೆಗಳು ಸಮಸ್ಯೆ ಎದುರಿಸುತ್ತಿವೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯಲ್ಲಿ ಮಳೆನೀರು ಸೋರಿ ತಾರಸಿಯ ಒಳಭಾಗ ಹಾಳಾಗಿದೆ.
ಉತ್ತಮ ಫಲಿತಾಂಶ
ತುಮಕೂರು ಜಿಲ್ಲೆಯ ವಸತಿ ಶಾಲೆಗಳ ಪೈಕಿ ಮೇಲನಹಳ್ಳಿ ಮೊರಾರ್ಜಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡಿ ಗಮನ ಸೆಳೆದಿದೆ. ಪ್ರತಿ ವರ್ಷ ಶೇ 100ರಷ್ಟು ಫಲಿತಾಂಶ ನೀಡುವುದರೊಂದಿಗೆ ಪ್ರತಿ ವಿದ್ಯಾರ್ಥಿಯ ಅಂಕಗಳು ಶೇ 70 ದಾಟುತ್ತವೆ. 2015ರ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ದೃವಿಕಾ ರಾಜ್ಯಕ್ಕೆ 5ನೇ ಟಾಪರ್‌ ಆಗಿದ್ದಳು. ಈ ವರ್ಷ ಇಬ್ಬರು ತಲಾ 620 ಅಂಕ ಪಡೆದು ತಾಲ್ಲೂಕಿಗೆ ಪ್ರಥಮರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.