ADVERTISEMENT

ಸಮಾಧಿ ಆದ್ಮೇಲೆ ಇತ್ತ ಬರ್ತಾರೆ: ತುಮಕೂರಿನ ಸಿದ್ಧಗಂಗಾ ಬಡಾವಣೆ ನಿವಾಸಿಗಳ ಅಸಮಾಧಾನ

'ಮನೆಗೆ ನುಗ್ಗುವ ಮಳೆ ನೀರು'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 7:58 IST
Last Updated 23 ಏಪ್ರಿಲ್ 2025, 7:58 IST
ತುಮಕೂರು ಸಿದ್ಧಗಂಗಾ ಬಡಾವಣೆಯ ರಾಜಕಾಲುವೆ ಸ್ಥಿತಿ
ತುಮಕೂರು ಸಿದ್ಧಗಂಗಾ ಬಡಾವಣೆಯ ರಾಜಕಾಲುವೆ ಸ್ಥಿತಿ   

ತುಮಕೂರು: ‘ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿಲ್ಲ, ಚರಂಡಿ ಸಮರ್ಪಕವಾಗಿಲ್ಲ, ಮಳೆ ಬಂದರೆ ಮನೆಗಳಿಗೆ ನೀರು ಹೋಗುವುದು ತಡೆಯುತ್ತಿಲ್ಲ. ಅಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಂಡರೆ ‘ಟೆಂಡರ್‌ ಕರೆದಿದ್ದೇವೆ’ ಎನ್ನುತ್ತಾರೆ. ಹೆಚ್ಚು–ಕಡಿಮೆಯಾಗಿ ಸತ್ತರೆ ಸಮಾಧಿ ಆದ ಮೇಲೆಯೇ ಇತ್ತ ತಿರುಗಿ ನೋಡುತ್ತಾರೆ’.....

ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ನಗರದ ಸಿದ್ಧಗಂಗಾ ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು...

ಸಿದ್ಧಗಂಗಾ ಬಡಾವಣೆ, ಅಶೋಕ ನಗರ, ಮುನಿಸಿಪಲ್‌ ಲೇಔಟ್‌, ಪಕೀರ್‌ಪಾಳ್ಯ, ಎಸ್‌.ಎಸ್‌.ಪುರಂ ಕೆಲ ಪ್ರದೇಶಗಳು 25ನೇ ವಾರ್ಡ್‌ಗೆ ಸೇರುತ್ತವೆ. ಬಹುತೇಕ ರಸ್ತೆಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಕೆಲವು ಕಡೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆ ಒತ್ತುವರಿಯಾಗಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ. ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ.

ADVERTISEMENT

ರಾಜಕಾಲುವೆಗೆ ತಡೆಗೋಡೆ ಅಥವಾ ತಂತಿ ಬೇಲಿ ಅಳವಡಿಸುವ ಕಾರ್ಯ ಆಗಿಲ್ಲ. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಕಾಲುವೆಗೆ ಬೀಳುವ ಸಂಭವ ಹೆಚ್ಚಿರುತ್ತದೆ. ರಸ್ತೆ ಬದಿಯಲ್ಲಿ ಅಳವಡಿಸಿದ ವಿದ್ಯುತ್‌ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ರಾತ್ರಿಯಾದರೆ ಕತ್ತಲು ಆವರಿಸುತ್ತದೆ. ಸ್ಮಾರ್ಟ್‌ ಸಿಟಿಯಡಿ ನಿರ್ಮಿಸಿದ ರಸ್ತೆಗಳಲ್ಲಿ ಹಂಪ್ಸ್‌ ಅಳವಡಿಸಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ರಸ್ತೆ ತಿರುವುಗಳಲ್ಲಿ ಸೂಚನಾ ಫಲಕಗಳಿಲ್ಲ.

ಪಾರ್ಕ್‌ ನಿರ್ವಹಣೆ ಇಲ್ಲ: ವಾರ್ಡ್‌ನಲ್ಲಿ ನಾಲ್ಕು ಪಾರ್ಕ್‌ಗಳಿವೆ. ಇದರಲ್ಲಿ 2 ಪಾರ್ಕ್‌ ಅಭಿವೃದ್ಧಿ ಪಡಿಸಲಾಗಿದೆ. ಅವು ಕೂಡ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬು ವಾಸನೆ ಬೀರುತ್ತಿವೆ. ಉದ್ಯಾನದಲ್ಲಿ ಪಾಲಿಕೆಯಿಂದ ಅಳವಡಿಸಿದ್ದ ಕಸ ಸಂಗ್ರಹ ಬುಟ್ಟಿಗಳು ಕಾಣೆಯಾಗಿವೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಮುನಿಸಿಪಲ್‌ ಲೇಔಟ್‌ ಬಳಿಯ ಗಾಂಧಿ ಪಾರ್ಕ್‌ನಲ್ಲಿ ಪ್ಲಾಸ್ಟಿಕ್‌, ಕಸ ತುಂಬಿಕೊಂಡಿದೆ. ವಾಯು ವಿಹಾರ ಮಾಡುವವರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.

ವಾರ್ಡ್‌ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಗ್ರಂಥಾಲಯದ ಅವಶ್ಯಕತೆ ಇದೆ. ಕಳೆದ ಹಲವು ವರ್ಷಗಳಿಂದ ಈ ಭಾಗದ ಜನರು ಮಹಾನಗರ ಪಾಲಿಕೆ ಸದಸ್ಯರ ಬಳಿ ಒತ್ತಾಯಿಸುತ್ತಾ ಬಂದಿದ್ದರೂ ಇವೆರಡು ಕಾರ್ಯ ರೂಪಕ್ಕೆ ಬಂದಿಲ್ಲ. ವಾರ್ಡ್‌ನ ವಿವಿಧ ಕಡೆಗಳಲ್ಲಿ ಮರದ ರೆಂಬೆಗಳು ವಿದ್ಯುತ್‌ ತಂತಿ ಮೇಲೆ ಹರಡಿದ್ದು, ತೆರವುಗೊಳಿಸಿಲ್ಲ. ಮುಂಗಾರು ತೀವ್ರವಾಗುವ ಮುನ್ನವೇ ರೆಂಬೆ ತೆರವುಗೊಳಿಸಿ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕು ಎಂಬುವುದು ವಾರ್ಡ್‌ ನಿವಾಸಿಗಳ ಒತ್ತಾಯ.

ಅಭಿವೃದ್ಧಿ ಆಗಿದ್ದೇನು?

* ಅಂಗನವಾಡಿ ನಿರ್ಮಾಣ

* ಉದ್ಯಾನವನ ಅಭಿವೃದ್ಧಿ

* ಪ್ರಮುಖ ರಸ್ತೆಗಳು ದುರಸ್ತಿ

ಸಮಸ್ಯೆ ಏನೇನು?

* ಅವೈಜ್ಞಾನಿಕ ರಸ್ತೆ ನಿರ್ಮಾಣ

* ತಗ್ಗು ಪ್ರದೇಶಗಳಿಗೆ ನುಗ್ಗುವ ನೀರು

* ಕಸ ವಿಲೇವಾರಿ ಸಮಸ್ಯೆ

* ಖಾಲಿ ಜಾಗದಲ್ಲಿ ಕಸದ ರಾಶಿ

ಹಂಪ್ಸ್ ಹಾಕಿಸಿ

ಬಡಾವಣೆ ರಸ್ತೆಗಳಲ್ಲಿ ಹಂಪ್ಸ್‌ ಹಾಕಿಸಿಲ್ಲ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಪಂದನೆ ಮಾತ್ರ ದೊರೆಯುತ್ತಿಲ್ಲ. ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತವೆ. ಹಲವರು ಕೈ ಕಾಲು ಮುರಿದುಕೊಂಡಿದ್ದಾರೆ. ಕನಿಷ್ಠ ಹಂಪ್ಸ್‌ ಹಾಕಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ.

–ಮಂಜುನಾಥ್, ಸಿದ್ಧಗಂಗಾ ಬಡಾವಣೆ

**

ನಾಯಿ ಕಾಟ ವಿಪರೀತ

ವಾರ್ಡ್‌ ಸೇರಿದಂತೆ ನಗರದ ಎಲ್ಲ ಕಡೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಯಾವ ಕಡೆ ಹೋದರೂ ಹಿಂಬಾಲಿಸಿಕೊಂಡು ಬರುತ್ತವೆ. ಕೈಯಲ್ಲಿ ಚೀಲ ಕಂಡರೆ ಸಾಕು ಕಚ್ಚಲು ಎರಗುತ್ತವೆ. ಮಕ್ಕಳು ಹಾಲು ತರುವುದಕ್ಕೆ ಅಂಗಡಿಗೆ ಹೋಗಲು ಹೆದರುತ್ತಿದ್ದಾರೆ. ಆತಂಕದಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

–ವಸಂತ್‌ ಕುಮಾರ್‌, ಅಶೋಕ ನಗರ

**

ಕಸ ವಿಲೇವಾರಿ ಸಮಸ್ಯೆ

ಕಸದ ವಾಹನಗಳು ಪ್ರತಿ ದಿನ ವಾರ್ಡ್‌ಗೆ ಬರುತ್ತಿವೆ. ಜನ ವಾಹನಗಳಿಗೆ ಕಸ ಹಾಕುತ್ತಿಲ್ಲ. ರಸ್ತೆ ಬದಿಯಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಾಯಿಗಳ ಕಾಟ ಹೆಚ್ಚಾಗಿದೆ. ರಸ್ತೆ ಬದಿ ಖಾಲಿ ಜಾಗದಲ್ಲಿ ಕಸ ಎಸೆಯುವುದನ್ನು ತಡೆಯಬೇಕು. ಕಸ ಸುರಿಯುವವರಿಗೆ ದಂಡ ವಿಧಿಸಿ ಅಗತ್ಯ ಕ್ರಮಕೈಗೊಳ್ಳಬೇಕು.

–ಪ್ರವೀಣ್‌, ಸಿದ್ಧಗಂಗಾ ಬಡಾವಣೆ

**

ಮರದ ರೆಂಬೆ ತೆರವುಗೊಳಿಸಿ

ಗಾಂಧಿ ಪಾರ್ಕ್‌ ಬಳಿ ಬೃಹತ್‌ ಮರಗಳು ಬೆಳೆದಿವೆ. ಮರದ ರೆಂಬೆಗಳು ವಿದ್ಯುತ್‌ ತಂತಿ ಅಂಗನವಾಡಿ ಕಟ್ಟಡಕ್ಕೆ ಹಬ್ಬಿವೆ. ಜೋರಾದ ಗಾಳಿ ಬೀಸಿದರೆ ವಿದ್ಯುತ್‌ ತಂತಿ ಮೇಲೆ ಮುರಿದು ಬೀಳುತ್ತವೆ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸಬಹುದು. ರೆಂಬೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ.

–ಅಂಬಿಕಾ, ಮುನಿಸಿಪಲ್‌ ಲೇಔಟ್

**

ರಸ್ತೆ ಅಭಿವೃದ್ಧಿ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಿದ್ಧಗಂಗಾ ಬಡಾವಣೆ ಅಶೋಕ ನಗರ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಎಲ್ಲ ಕಡೆಗಳಲ್ಲಿ ಡಾಂಬರೀಕರಣ ಮಾಡಲಾಗಿದೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ. ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.

–ಮಂಜುಳಾ ಕೆ.ಎಸ್‌.ಆದರ್ಶ್‌, ಮಾಜಿ ಸದಸ್ಯೆ ಮಹಾನಗರ ಪಾಲಿಕೆ

ನಿಲ್ಲದ ನಾಯಿ ಉಪಟಳ

ಅಶೋಕ ನಗರ ಸಿದ್ಧಗಂಗಾ ಬಡಾವಣೆ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಿಂಡು ಹಿಂಡಾಗಿ ಓಡಾಡುವ ನಾಯಿ ಕಂಡು ಸಾರ್ವಜನಿಕರು ಹೆದರಿದ್ದಾರೆ. ಕೈಯಲ್ಲಿ ಹಾಲಿನ ಪ್ಯಾಕೆಟ್‌ ಕಂಡರೂ ಓಡಿಸಿಕೊಂಡು ಬರುತ್ತಿವೆ. ಮಕ್ಕಳು ಮಹಿಳೆಯರು ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೈಕ್‌ ಕಾರ್‌ ಹಿಂಬಾಲಿಸಿಕೊಂಡು ಬರುವ ನಾಯಿಗಳಿಂದ ಹೆಚ್ಚಿನ ತೊಂದರೆಯಾಗುತ್ತಿದೆ. ನಾಯಿ ಕಚ್ಚುವುದರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆಗೆ ಉರುಳಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ.

‘ಮಾಂಸದಂಗಡಿ ಹೋಟೆಲ್‌ ತ್ಯಾಜ್ಯ ರಸ್ತೆಯ ಪಕ್ಕದಲ್ಲಿಯೇ ಸುರಿಯುತ್ತಿದ್ದಾರೆ. ಇದು ನಾಯಿಗಳ ಪಾಲಿಗೆ ಉತ್ತಮ ಆಹಾರವಾಗುತ್ತಿದೆ. ಇದನ್ನು ಹುಡುಕಿಕೊಂಡು ಹೆಚ್ಚಿನ ಸಂಖ್ಯೆಯ ನಾಯಿಗಳು ಇತ್ತ ಸುಳಿಯುತ್ತಿವೆ. ಮಹಾನಗರ ಪಾಲಿಕೆ ಅಧಿಕಾರಿಗಳು ನಾಯಿಗಳಿಗೆ ಕಡಿವಾಣ ಹಾಕಲು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಸಿದ್ಧಗಂಗಾ ಬಡಾವಣೆ ರಮೇಶ್‌ ಕುಮಾರ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.