ADVERTISEMENT

ತುಮಕೂರು: ಟಿಜಿಎಂಸಿ ಬ್ಯಾಂಕ್ ನಿರ್ದೇಶಕರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:41 IST
Last Updated 20 ಸೆಪ್ಟೆಂಬರ್ 2023, 7:41 IST

ತುಮಕೂರು: ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ–ಆ‍ಪರೇಟಿವ್ ಬ್ಯಾಂಕ್‌ (ಟಿಜಿಎಂಸಿ) ನಿರ್ದೇಶಕರಾದ ಕೆ.ಬಿ.ಶಿವಕುಮಾರ್, ಎನ್.ಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

‘2022–23ನೇ ಸಾವಿನ ವಾರ್ಷಿಕ ವರದಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಖರ್ಚು– ವೆಚ್ಚಗಳ ಅನುಮೋದನೆಗೆ ಮಂಡಿಸಿರುವ ಪಟ್ಟಿಗೆ ಪ್ರತಿರೋಧ ವ್ಯಕ್ತಪಡಿಸಿದ್ದೇನೆ. ಈ ಸಾಲಿನಲ್ಲಿ ಖರ್ಚು– ವೆಚ್ಚಗಳಿಗೆ ₹1 ಕೋಟಿ ಮಂಜೂರಾಗಿದ್ದರೆ, ₹33.83 ಕೋಟಿ ಖರ್ಚು ತೋರಿಸಲಾಗಿದೆ. ಎಆರ್‌ಸಿಎಲ್ ಸಂಸ್ಥೆ ಜತೆಗಿನ ನಷ್ಟವನ್ನು ಖರ್ಚು– ವೆಚ್ಚಗಳ ಲೆಕ್ಕದಲ್ಲಿ ತೋರಿಸಲಾಗಿದೆ. ಇದು ನಿಯಮ ಬಾಹಿರವಾಗಿರುತ್ತದೆ’ ಎಂದು ಎನ್.ಮೋಹನ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕಳೆದ ಒಂದು ವರ್ಷದಿಂದ ಬ್ಯಾಂಕಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಕೆಲವು ಸದಸ್ಯರು ಎತ್ತಿರುವ ಪ್ರಶ್ನೆಗಳು ಹಾಗೂ ಬ್ಯಾಂಕಿನಲ್ಲಿ ನಡೆಯುತ್ತಿರುವ ಹತ್ತು, ಹಲವು ವಿದ್ಯಮಾನಗಳ ಬಗ್ಗೆ ನನಗೆ ಮಾಹಿತಿ ಇಲ್ಲವಾಗಿದೆ. ಬ್ಯಾಂಕ್‌ನ ಸದಸ್ಯರು ಕೇಳುತ್ತಿರುವ ಹಲವಾರು ನಿರ್ದಿಷ್ಟ ಪ್ರಶ್ನೆಗಳಿಗೆ ಬ್ಯಾಂಕ್‌ನ ನಿರ್ದೇಶಕನಾಗಿ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರ್ದೇಶಕನಾಗಿ ಮುಂದುವರಿಯುವುದು ಕಷ್ಟಕರವಾಗಿದೆ. ಹಾಗಾಗಿ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ’ ಎಂದು ಕೆ.ಬಿ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.