ADVERTISEMENT

ಎಸ್ಐಟಿಯಲ್ಲಿ ರೊಬೋಟಿಕ್ ಸಂಶೋಧನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 1:37 IST
Last Updated 29 ನವೆಂಬರ್ 2020, 1:37 IST
ತುಮಕೂರು ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ರೊಬ್ಯಾಟಿಕ್ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ
ತುಮಕೂರು ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ರೊಬ್ಯಾಟಿಕ್ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ   

ತುಮಕೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗಿ ರೊಬೋಟಿಕ್ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ, ತರಬೇತಿ, ಉದ್ಯೋಗ ಕುರಿತಾದ ಪರಸ್ಪರ ವಿನಿಮಯಕ್ಕಾಗಿ ಸಿಂಗಾಪುರದ ಬ್ಲೂಪ್ರಿಸಮ್ ಸಂಸ್ಥೆ, ಬೆಂಗಳೂರಿನ ನತೆಲ್ಲಾ ಕಂಪನಿಗಳ ಸಹಯೋಗದಲ್ಲಿ ನಗರದ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ₹20 ಲಕ್ಷ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ರೊಬ್ಯಾಟಿಕ್ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ.

ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಈ ಕೇಂದ್ರ ಆರಂಭಿಸಿದ್ದು, ಎರಡು ವರ್ಷದಲ್ಲಿ 600 ಮಂದಿ ವಿದ್ಯಾರ್ಥಿಗಳಿಗೆ ಅಧ್ಯಯನ, ತರಬೇತಿ, ಉದ್ಯೋಗ ಕುರಿತಾದ ಸಂಶೋಧನೆಗಳಿಗೆ ಅವಕಾಶವಿದೆ. ಜಿಲ್ಲೆಯ ಇತರೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೂ ಸಹಕಾರಿಯಾಗಲಿದೆ.

ಬ್ಲೂಪ್ರಿಸಮ್ ಸಂಸ್ಥೆ ಭಾರತದಲ್ಲಿ ರೊಬೋಟಿಕ್ ಕ್ಷೇತ್ರದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡರೂ ತುಮಕೂರು ಘಟಕ ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ADVERTISEMENT

‘ಸಾಹೇ’ ವಿಶ್ವವಿದ್ಯಾಲಯ ಕುಲಪತಿ ಡಾ.ಬಾಲಕೃಷ್ಣ ಪಿ.ಶೆಟ್ಟಿ ಉದ್ಘಾಟಿಸಿ ಮಾತನಾಡಿ, ‘ರೊಬೋಟಿಕ್ ಆಟೊಮೇಷನ್ ಪ್ರಕ್ರಿಯೆಯಿಂದ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಹಲವಾರು ಬಿಕ್ಕಟ್ಟುಗಳಿಗೆ ಪರಿಹಾರ ದೊರಕಲಿದೆ. ರೋಗಿಗಳವೈಯಕ್ತಿಕ ವಿವರಗಳ ಗೌಪ್ಯತೆ, ಆಸ್ಪತ್ರೆಯ ಕಚೇರಿ ದಾಖಲೆಗಳ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪದೋಷ, ವಿಳಂಬ ತಪ್ಪಿಸಹುದು’ ಎಂದರು.

ಬ್ಲೂಪ್ರಿಸಮ್ ಸಂಸ್ಥೆ ಬೆಂಗಳೂರು ವಿಭಾಗದ ಎಂ.ಮಂಜುನಾಥ್, ಬೆಂಗಳೂರಿನ ನತೆಲ್ಲಾ ಇನೋವೇಷನ್ ಕಂಪನಿ ನಿರ್ದೇಶಕ ಎಂ.ಪ್ರದೀಪ್, ಕಾಲೇಜು ಪ್ರಾಂಶುಪಾಲ ಡಾ.ರವಿಪ್ರಕಾಶ್, ‘ಸಾಹೇ’ ವಿ.ವಿ ಕುಲಸಚಿವ ಡಾ.ಎಂ.ಝೆಡ್.ಕುರಿಯನ್ ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗ ಪ್ರಾಧ್ಯಾಪಕ ಎಂ.ಸಿ.ಚಂದ್ರಶೇಖರ್, ಪ್ರಾಧ್ಯಾಪಕರಾದ ಎಂ.ಸುಷ್ಮಾ, ಎಚ್.ಸಿ.ರಶ್ಮಿ, ಎನ್.ಪ್ರದೀಪ್, ಜಿ.ನಿರ್ಮಲ, ಪ್ರಿಯಾಂಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.