ADVERTISEMENT

ಆರ್‌ಟಿಇ ಶುಲ್ಕ ಪಾವತಿಗೆ ಒತ್ತಾಯ: ಹದಿನೈದು ದಿನ ಬಿಟ್ಟು ಹೋರಾಟ

ಶಿಕ್ಷಣ ಇಲಾಖೆಗೆ ಜಿಲ್ಲಾ ಖಾಸಗಿ ಅನುದಾನರಹಿತ ಶಾಲೆ ಆಡಳಿತ ಮಂಡಳಿ ಒಕ್ಕೂಟ ಟ್ರಸ್ಟ್ ಗಡುವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 16:23 IST
Last Updated 8 ಜುಲೈ 2019, 16:23 IST

ತುಮಕೂರು: 'ಖಾಸಗಿ ಅನುದಾನರಹಿತ ಶಾಲೆಗೆ ಕಳೆದ ವರ್ಷ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಬರಬೇಕಿದ್ದ ಮೊತ್ತ ಕೆಲವು ಶಾಲೆಗಳಿಗೆ ಒಂದು ಕಂತು ಮಾತ್ರ ಬಂದಿದೆ. ಹಲವಾರು ಶಾಲೆಗಳಿಗೆ ಒಂದು ಕಂತೂ ಬಂದಿಲ್ಲ. 15 ದಿನದಲ್ಲಿ ಶಿಕ್ಷಣ ಇಲಾಖೆ ಹಣ ಬಿಡುಗಡೆ ಮಾಡದೇ ಇದ್ದರೆ ಹೋರಾಟ ಮಾಡಲಾಗುವುದು' ಎಂದು ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಮಂಡಳಿ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಹಾಲನೂರು ಲೇಪಾಕ್ಷ ಎಚ್ಚರಿಕೆ ನೀಡಿದ್ದಾರೆ.

'ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಸ್ಪಂದಿಸಿಲ್ಲ. ಉದಾಸೀನ ಮಾಡಲಾಗಿದೆ' ಎಂದು ದೂರಿದ್ದಾರೆ.

'ಸರ್ಕಾರ ಒಂದು ಸರ್ಕಾರಿ ಶಾಲೆಯಲ್ಲಿ ಒಂದು ಮಗುವಿಗೆ 1 ವರ್ಷಕ್ಕೆ ಮಾಡುವ ವೆಚ್ಚಕ್ಕಿಂತ ಕಡಿಮೆ ಶುಲ್ಕ ಪಡೆದು ಮಕ್ಕಳಿಗೆ ಪ್ರಾಮಾಣಿಕವಾಗಿ ಶಿಕ್ಷಣವನ್ನು ಖಾಸಗಿ ಅನುದಾನರಹಿತ ಶಾಲೆಗಳು ನೀಡುತ್ತಿವೆ. ಬಡ ಮತ್ತು ದೀನ ದಲಿತರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಖಾಸಗಿ ಅನುದಾನಿತರಹಿತ ಶಾಲೆಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ' ಎಂದು ಹೇಳಿದ್ದಾರೆ.

ADVERTISEMENT

'ತುಮಕೂರು ನಗರವನ್ನು ಶೈಕ್ಷಣಿಕ ನಗರವೆಂಬ ಹೆಗ್ಗಳಿಕೆ ಬರಲು ಹಲವು ದಶಕಗಳಿಂದ ಶಿಕ್ಷಣ ಸಂಸ್ಥೆಗಳನ್ನು ಅವಿರತವಾಗಿ ನಡೆಸಿಕೊಂಡು ಬಂದಿರುವುದೇ ಕಾರಣ. ಆದರೆ, ಈಗ ಇಂತಹ ಶಿಕ್ಷಣ ಸಂಸ್ಥೆಗಳು ಕ್ಷೀಣಿಸುತ್ತಿವೆ. ಅಲ್ಲದೇ ಈಗಾಗಲೇ ಕೆಲವು ಸಂಪೂರ್ಣ ಮುಚ್ಚಿ ಹೋಗಿವೆ' ಎಂದು ಹೇಳಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳ ಅಬ್ಬರ: 'ಬೆಂಗಳೂರು ಮತ್ತು ಹೊರ ರಾಜ್ಯದ ಕಾರ್ಪೊರೇಟ್ ಸಂಸ್ಥೆಗಳು ನಗರಕ್ಕೆ ಬಂದು ಕರಾರು ಒಪ್ಪಂದದ ಮೇಲೆ ಎಕರೆಗಟ್ಟಲೆ ಭೂಮಿ ಪಡೆದು ದೈತ್ಯಾಕಾರದ ಕಟ್ಟಡ ನಿರ್ಮಿಸಿಕೊಂಡು ಡಜನ್‌ಗಟ್ಟಲೆ ಬಸ್‌ಗಳನ್ನು ಖರೀದಿಸಿ ಶಾಲೆ ಆರಂಭಿಸುತ್ತಿವೆ. ಎಲ್ಲವೂ ಉಚಿತ ಎಂದು ಹೇಳಿ ಪೋಷಕರಿಗೆ ಪ್ರಲೋಬನೆ ತಂತ್ರ ಮಾಡುತ್ತಿವೆ’ ಎಂದು ಆರೋಪಿಸಿದ್ದಾರೆ.

‘ಬೇರೆ ಶಾಲೆಗಳಲ್ಲಿನ ಉತ್ತಮ ಶಿಕ್ಷಕರನ್ನು ಹೆಚ್ಚಿನ ವೇತನ ಘೋಷಣೆ ಮಾಡುತ್ತಿವೆ. ಒಂದು ಕಡೆ ಅನುಮತಿ ಪಡೆದು ನಾಲ್ಕು ಕಡೆ ಅದೇ ಹೆಸರಿನಲ್ಲಿ ಶಾಲೆ ನಡೆಸುತ್ತಾರೆ. ಬಂಡವಾಳ ಶಾಹಿಗಳು ಉದ್ಯಮವಾಗಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಏನೂ ನಿಯಂತ್ರಣ ಕ್ರಮ ಕೈಗೊಂಡಿಲ್ಲ. ಇಂತಹ ಬದಲಾವಣೆಯ ವ್ಯವಸ್ಥೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯ ಸರ್ಕಾರ ಸ್ಪಂದಿಸಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.