ADVERTISEMENT

ಜೂಜು ದಂಧೆ ಬಗ್ಗೆ ಪೊಲೀಸರ ಮೌನ: ಶಾಸಕ ಡಿ.ಸಿ.ಗೌರಿಶಂಕರ್ ಆರೋಪ

ತುಮಕೂರು ಗ್ರಾಮಾಂತರ ಕ್ಷೇತ್ರದ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 19:30 IST
Last Updated 6 ನವೆಂಬರ್ 2019, 19:30 IST
ಡಿ.ಸಿ.ಗೌರಿಶಂಕರ್
ಡಿ.ಸಿ.ಗೌರಿಶಂಕರ್   

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಗಮನಕ್ಕೂ ತಂದಿದ್ದೇನೆ. ಆದರೂ ಕೆಳಹಂತದ ಅಧಿಕಾರಿಗಳು ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಸ್‌ಪಿ, ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಳಹಂತದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಜೂಜಾಟ ಹೆಚ್ಚಿದೆ. ಇತ್ತೀಚೆಗೆ ನಡೆದ ಚಟ್ಟ ಮೋಹನ್ ಕೊಲೆ ಪ್ರಕರಣಕ್ಕೂ ಇದೇ ಕಾರಣ’ ಎಂದರು.

ಮೋಹನ್ ಮತ್ತು ಆರೋಪಿ ಟೆಂಪಲ್ ರಾಜ ಜೂಜಾಟದ ವಿಚಾರವಾಗಿ ಪರಸ್ಪರ ಜಗಳವಾಡಿಕೊಂಡಿದ್ದರು. ಆ ದ್ವೇಷದ ಕಾರಣಕ್ಕೆ ಕೊಲೆ ಆಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ನನಗೆ ಸಾರ್ವಜನಿಕರು ತಿಳಿಸಿದರು. ಅಲ್ಲದೆ ಹಾಡಹಗಲೇ ದೊಡ್ಡತಿಮ್ಮಯ್ಯನಪಾಳ್ಯದ ಭಾಗ್ಯಮ್ಯ ಎಂಬುವವರ ಕೊಲೆ ಆಗಿದೆ. ಇಷ್ಟೆಲ್ಲಾ ಕಾನೂನು ಸುವಸ್ಯವಸ್ಥೆ ಕೆಟ್ಟರೂ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ADVERTISEMENT

ಚಟ್ಟ ಮೋಹನ್ ಕೊಲೆಯ ಹಿಂದೆ ರಾಜಕಾರಣದ ಒತ್ತಡವಿದೆ. ಈ ಕೊಲೆಯ ತನಿಖೆಯನ್ನು ಸೂಕ್ತವಾಗಿ ನಡೆಸಬೇಕು. ಕೊಲೆಗೆ ಕಾರಣವೇನು ಎನ್ನುವುದನ್ನು ಪತ್ತೆ ಮಾಡಬೇಕು. ಟೆಂಪರ್ ರಾಜನ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ನಕಲಿ ಎಂದು ದೂರಿದರು.

ಅಕ್ರಮ ಮದ್ಯ ಮಾರಾಟವೂ ಹೆಚ್ಚಿದೆ. ಪೊಲೀಸರಿಗೆ ದೂರು ನೀಡಿದರೂ ಕ್ರಮಕೈಗೊಳ್ಳುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಹೆಬ್ಬೂರಿನಲ್ಲಿ ಬೆಳಿಗ್ಗೆ 6.30ಕ್ಕೆ ಮದ್ಯದ ಅಂಗಡಿಗಳು ತೆರೆಯುತ್ತವೆ. ಪಾಲಸಂದ್ರದಲ್ಲಿ ಅಕ್ರಮ ಮಾರಾಟದ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ಬಂಧಿಸಿದ ಕೆಲವೇ ಕ್ಷಣಗಳಲ್ಲಿ ಆತ ಹಳ್ಳಿಯಲ್ಲಿ ರಾಜಾರೋಷವಾಗಿ ಓಡಾತ್ತಿದ್ದಾನೆ ಎಂದರು.

ಹೀಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ವಿಫಲರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆದರೆ ಪೊಲೀಸರೇ ಕಾರಣ ಎಂದು ಹೇಳಿದರು.

ಜೋರಾದ ವರ್ಗಾವಣೆ ದಂಧೆ: ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ಜೋರಾಗಿದೆ. ಇದಕ್ಕೆ ಮಾಜಿ ಶಾಸಕರೊಬ್ಬರು ಕಾರಣ ಎಂದು ಸುರೇಶ್ ಗೌಡ ಹೆಸರು ಹೇಳದೆಯೇ ಟೀಕಿಸಿದರು.

‘ನಮ್ಮ ಮಾತು ನಡೆಯುತ್ತಿಲ್ಲ’ ಎಂದು ಬಿಜೆಪಿ ನಗರದ ಶಾಸಕರೇ ನನ್ನ ಬಳಿ ಹೇಳಿದ್ದಾರೆ. ಗ್ರಾಮಾಂತರ ಕ್ಷೇತ್ರಕ್ಕೆ ಬಂದಿದ್ದ ₹ 40 ಕೋಟಿ ಅನುದಾನವನ್ನು ತಡೆಹಿಡಿಸಲು ಮಾಜಿ ಶಾಸಕರು ಮುಂದಾಗಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಾಗಿದ್ದಾರೆ. ಅವರು ಜಿಲ್ಲೆಗೆ ಉಸ್ತುವಾರಿ ಆಗುವುದರ ಬದಲು ಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದಾರೆ ಎಂದು ಟೀಕಿಸಿದರು.

***

ಬಗರ್ ಹುಕುಂ ಅಕ್ರಮ; ನ್ಯಾಯಾಲಯಕ್ಕೆ ಮೊರೆ

ಗ್ರಾಮಾಂತರ ಕ್ಷೇತ್ರದಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವಿಚಾರದಲ್ಲಿ ಅಕ್ರಮಗಳು ನಡೆದಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಅವರು ಉಪವಿಭಾಗಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಎಸಿ ಅವರು ತನಿಖೆ ನಡೆಸಿ ವರದಿ ನೀಡಿದ್ದಾರೆ. ಅಕ್ರಮ ನಡೆದಿರುವುದು ಪತ್ತೆ ಆಗಿದೆ ಎಂದು ಗೌರಿಶಂಕರ್ ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಅವರು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆದರೆ ಕಂದಾಯ ಸಚಿವ ಆರ್.ಅಶೋಕ್ ಅವರ ಮೂಲಕ ಯಾವುದೇ ಕ್ರಮ ಜರುಗಿಸದಂತೆ ಕಾರ್ಯದರ್ಶಿ ಅವರಿಗೆ ಒತ್ತಡ ಹೇರಿದ್ದಾರೆ. ಆದ್ದರಿಂದ ಈ ಬಗ್ಗೆ ಹೈಕೋರ್ಟ್ ಮೊರೆ ಹೋಗಲು ವಕೀಲರ ಜತೆ ಚರ್ಚಿಸುತ್ತಿದ್ದೇನೆ ಎಂದರು.‌

***

ನಾಳೆ ಅರೇಹಳ್ಳಿಗೆ ದೇವೇಗೌಡರು

ಗೂಳೂರು ಹೋಬಳಿ ಅರೇಹಳ್ಳಿಯ ಶಕ್ತಿ ಆಂಜನೇಯ ಸ್ವಾಮಿ, ದೊಡ್ಡಮ್ಮದೇವಿ ಮತ್ತು ಚಿಕ್ಕಮ್ಮ ದೇವಾಲಯಗಳ ಸೇವಾ ಸಮಿತಿಯಿಂದ ನ.8ರವರೆಗೆ ನೂತನ ದೇವಾಲಯಗಳ ಉದ್ಘಾಟನೆ ಮತ್ತು ಶಿಲಾ ವಿಗ್ರಹಗಳ ಪ್ರತಿಷ್ಠಾಪನೆ ಜರುಗಲಿದೆ.

8ರಂದು ಮಧ್ಯಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಂಗಳಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ಗೌರಿಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.