ಶಾಸಕ ಎಸ್.ಆರ್.ಶ್ರೀನಿವಾಸ್
ತುಮಕೂರು: ಜೆಡಿಎಸ್ ಶಾಸಕರಾಗಿದ್ದ ಸಮಯದಲ್ಲಿ ಎಸ್.ಆರ್.ಶ್ರೀನಿವಾಸ್ ಅವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರಿಸಿಕೊಳ್ಳಲು ಹಣದ ಆಮಿಷ ಒಡ್ಡಿದ ಆರೋಪ ಎದುರಿಸುತ್ತಿದ್ದ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಪರಾಧಿ ಎಂದು ಆದೇಶಿಸಿದೆ.
ಸುರೇಶ್‌ಗೌಡ ಮೇಲಿನ ಆರೋಪವನ್ನು ಸಾಬೀತುಪಡಿಸಲು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಅವರ ಪತ್ನಿ ಭಾರತಿ ಅವರಿಗೆ ಸಾಧ್ಯವಾಗಿಲ್ಲ.
ಪ್ರಕರಣ ಏನು?: ಜೆಡಿಎಸ್ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ ಅವರನ್ನು 2010ರಲ್ಲಿ ಬಿಜೆಪಿಗೆ ಸೇರಿಸಿಕೊಳ್ಳಲು ಸುರೇಶ್‌ಗೌಡ ಅವರು ₹25 ಲಕ್ಷ ಹಣ ನೀಡುವ ಆಮಿಷ ಒಡ್ಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹಣದ ಆಮಿಷ ಒಡ್ಡಿದ ವಿಡಿಯೊ, ಆಡಿಯೊ ಇರುವುದಾಗಿ ಭಾರತಿ ಹೇಳಿಕೊಂಡಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಸಂಬಂಧ ರಮೇಶ್‌ಗೌಡ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, 2015ರಲ್ಲಿ ಸುರೇಶ್‌ಗೌಡ, ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಸಮಯದಲ್ಲಿ ಶ್ರೀನಿವಾಸ್ ಹೆಸರು ಕೈಬಿಟ್ಟು, ಸುರೇಶ್‌ಗೌಡ ವಿರುದ್ಧ ಆರೋಪ ಹೊರಿಸಲಾಗಿತ್ತು. ವಿಚಾರಣೆ ಸಮಯದಲ್ಲಿ ಆರೋಪ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಆರೋಪ ಮುಕ್ತಗೊಳಿಸಲಾಗಿದೆ ಎಂದು ಸುರೇಶ್‌ಗೌಡ ಪರ ವಕೀಲರಾದ ನಳಿನಾ ಮಾಯಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.