ADVERTISEMENT

ಜನಹಿತ ಸರ್ಕಾರಕ್ಕೆ ಕೈ ಜೋಡಿಸಿ: ಮೈತ್ರಿ ಮುಖಂಡರ ಮನವಿ

ತುಮಕೂರು: ಜೆಡಿಎಸ್, ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 16:26 IST
Last Updated 7 ಏಪ್ರಿಲ್ 2019, 16:26 IST
ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ ಮಾತನಾಡಿದರು
ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ ಮಾತನಾಡಿದರು   

ತುಮಕೂರು: ಇಲ್ಲಿನ ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಭಾನುವಾರ ಸಂಜೆ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಜೆಡಿಎಸ್– ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶದಲ್ಲಿ ಮೈತ್ರಿ ಮುಖಂಡರು ಪ್ರಧಾನಿ ನರೇಂದ್ರ, ಕೆಂದ್ರ ಸರ್ಕಾರದ ಯೋಜನೆಗಳು, ಬಿಜೆಪಿ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.

‘ಹುಸಿ ಭರವಸೆ ನೀಡಿ ಅಧಿಕಾರದ ಗದ್ದುಗೆ ಏರಿದ ಪ್ರಧಾನಿ ನರೇಂದ್ರ ಮೋದಿ ನಂತರ ತಾವೇ ನೀಡಿದ ಭರವಸೆಗಳನ್ನು ಮರೆತರು. ಘೋಷಣೆ ಮಾಡಿದ ಯಾವ ಯೋಜನೆಗಳು ದೇಶದ ಜನರ ಉದ್ಧಾರ ಮಾಡಿಲ್ಲ. ಐದು ವರ್ಷವಾದರೂ ಅಚ್ಚೇ ದಿನ್ ಬರಲೇ ಇಲ್ಲ’ ಎಂದು ಹರಿಹಾಯ್ದರು.

ಜೆಡಿಎಸ್ ವರಿಷ್ಠ ಹಾಗೂ ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಮಾತನಾಡಿ, ‘ಈ ಚುನಾವಣೆ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ರಾಜ್ಯದ ಜನರು ಮೈತ್ರಿ ಅಭ್ಯರ್ಥಿಗಳಿಗೆ ನೀಡುವ ಮತ ದೇಶದಲ್ಲಿ ಜನಹಿತ ಸರ್ಕಾರ ತರುವಲ್ಲಿ ಮಹತ್ವದ ಪಾತ್ರವಹಿಸಲಿದೆ’ ಎಂದು ಹೇಳಿದರು.

ADVERTISEMENT

‘ಒಬ್ಬ ಅಭ್ಯರ್ಥಿಯಾಗಿ ನಾನು ಕ್ಷೇತ್ರದಲ್ಲಿ ಪ್ರಚಾರ ಮಾಡಲೇಬೇಕಾಗಿದೆ. ಆದಾಗ್ಯೂ ಬೇರೆ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡುತ್ತೇನೆ. ಕ್ಷೇತ್ರದಲ್ಲಿ ನೀರಿನ ವಿಚಾರದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಯಾರೂ ಕಿಮ್ಮತ್ತು ಕೊಡಬಾರದು’ ಎಂದು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ‘ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಹಿತವನ್ನು ಬಿಜೆಪಿ ಮೊದಲಿನಿಂದಲೂ ಕಡೆಗಣಿಸಿದೆ. ಪ್ರಧಾನಿ ಮೋದಿ ಬರೀ ಸುಳ್ಳು ಹೇಳಿಕೊಂಡು ಬಂದರೇ ಹೊರತು ಜನರ ಏಳಿಗೆಗೆ ಏನೂ ಕೆಲಸ ಮಾಡಲಿಲ್ಲ. ಅಲ್ಪಸಂಖ್ಯಾತರನ್ನು ಬೀದಿಯಲ್ಲಿ ಹೊಡೆದು ಸಾಯಿಸಿದಾಗ, ಕೋಮು ಸಂಘರ್ಷ ನಡೆದಾಗ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಹೀಗೆ ಎಂಥದ್ದೇ ಮನಕಲಕುವ ಘಟನೆಗಳು ನಡೆದರೂ ಪ್ರಧಾನಿ ಮನಸ್ಸು ಕರಗಲಿಲ್ಲ. ಜನ ವಿರೋಧಿ ನೀತಿ ಅನುಸರಿಸಿ ಆಡಳಿತ ನಡೆಸಿದ್ದೇ ಅವರ ಸಾಧನೆ’ ಎಂದು ಲೇವಡಿ ಮಾಡಿದರು.

‘ಇಲ್ಲಿನ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರು ನನ್ನ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ. ಸಾಧನೆಗಳ ಪಟ್ಟಿಯನ್ನೇ ಕೊಡುತ್ತೇನೆ. ತುಮಕೂರು ಜಿಲ್ಲೆಗೆ ವಿಶ್ವವಿದ್ಯಾನಿಲಯ, ₹ 67 ಕೋಟಿ ಮೊತ್ತದ ಕ್ಯಾನ್ಸರ್ ಆಸ್ಪತ್ರೆ, ನೀರಾವರಿ ಕಾಲುವೆ ಆಧುನೀಕರಣ ಹೀಗೆ ಅನೇಕ ಸಾಧನೆ ಮಾಡಿದ್ದೇವೆ’ ಎಂದು ಹೇಳಿದರು.

‘ಎದೆತಟ್ಟಿ ಹೇಳುವ ರೀತಿ ಹಿಂದಿನ ಸರ್ಕಾರ, ಈಗಿನ ಸರ್ಕಾರದಲ್ಲಿ ಸಾಧನೆ ಮಾಡಿದ್ದೇವೆ. 67 ಇಂಚಿನ ಎದೆ ಹೊಂದಿರುವ ಪ್ರಧಾನಿ ಮೋದಿ ಅವರು ಏನು ಸಾಧನೆ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ‘ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳ ಜೊತೆಗೆ ಕೈ ಜೋಡಿಸಿದೆ. ದೇಶದ, ಏಕತೆ, ಘನತೆ ಉಳಿಸಲು ಈ ಚುನಾವಣೆ ಮಾಡುತ್ತಿದ್ದೇವೆ. ಹೀಗಾಗಿ, ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಎನ್.ಎ. ಹ್ಯಾರೀಸ್ ಮಾತನಾಡಿ, ‘ಬಿಜೆಪಿ ಅಧಿಕಾರದ ಆಸೆಗೆ ಹುಸಿ ಭರವಸೆ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಜನಹಿತ ಕಡೆಗಣಿಸಿದ ಪಕ್ಷವನ್ನು ಬೆಂಬಲಿಸಬೇಡಿ. ಸದಾ ಬಡವರ ಹಿತ, ಉದ್ಯೋಗ ಸೃಷ್ಟಿ, ಅಭಿವೃದ್ಧಿ ಅಂಶಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿರುವ ಮೈತ್ರಿಗೆ ಬೆಂಬಲಿಸಿ’ ಎಂದು ಹೇಳಿದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಂ.ಸಿ.ವೇಣುಗೋಪಾಲ್, ಚೌಡರೆಡ್ಡಿ ತೂಪಲ್ಲಿ, ಬೆಮೆಲ್ ಕಾಂತರಾಜ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಮುಖಂಡಾರದ ಎಚ್.ಸಿ.ನೀರಾವರಿ, ಮಾಜಿ ಸಂಸದ ಮೇಲಗಿರಿಯಪ್ಪ, ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜ್, ಕಾಂಗ್ರೆಸ್ ಮುಖಂಡ ಶಕೀಲ್ ಅಹಮ್ಮದ್, ಮಾಜಿ ಶಾಸಕರಾದ ಷಫಿ ಅಹಮ್ಮದ್, ಸುಧಾಕರಲಾಲ್, ಕೆ.ಷಡಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ , ಟಿ.ಎಸ್. ನಿರಂಜನ್ ವೇದಿಕೆಯಲ್ಲಿದ್ದರು. ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಸ್ವಾಗತಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.