ADVERTISEMENT

ಕಣ್ತೆರೆದು ನೋಡದ ಪಾಲಿಕೆ: ಸ್ಟೇಷನ್ ರಸ್ತೆ ನಿವಾಸಿಗಳಿಗೆ ದುರ್ನಾತ ತಪ್ಪುವುದೆಂದು?

ಹದಗೆಟ್ಟ ರಸ್ತೆಯ ಅಧೋಗತಿಗೆ ಕಂಗೆಟ್ಟ ಜನ

ರಾಮರಡ್ಡಿ ಅಳವಂಡಿ
Published 14 ಅಕ್ಟೋಬರ್ 2018, 20:00 IST
Last Updated 14 ಅಕ್ಟೋಬರ್ 2018, 20:00 IST
ರೈಲ್ವೆ ಸ್ಟೇಷನ್ ರಸ್ತೆಯ ಬಿಸಿಎಂ ವಿದ್ಯಾರ್ಥಿನಿಲಯ ಮುಂಭಾಗದ ಚರಂಡಿ ಸ್ಥಿತಿ
ರೈಲ್ವೆ ಸ್ಟೇಷನ್ ರಸ್ತೆಯ ಬಿಸಿಎಂ ವಿದ್ಯಾರ್ಥಿನಿಲಯ ಮುಂಭಾಗದ ಚರಂಡಿ ಸ್ಥಿತಿ   

ತುಮಕೂರು: ನಗರದ ಪ್ರಮುಖ ರಸ್ತೆಗಳಲ್ಲಿ ಈ ರಸ್ತೆಯೂ ಒಂದು. ಇಲ್ಲಿ ನಿತ್ಯ ಜನರು ಹಾಗೂ ವಾಹನ ಸಂಚಾರ ಹೆಚ್ಚು.
ಹದಗೆಟ್ಟು ಹಾಳಾಗಿರುವ ಈ ರಸ್ತೆಯಲ್ಲಿ ಸಂಚರಿಸುವುದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅನಿವಾರ್ಯ ಮತ್ತು ದುಸ್ಸಾಹಸ.

ಯಾಕೆಂದರೆ ನಗರದ ವಿವಿಧ ಬಡಾವಣೆಗಳಿಂದ ಜನರು ರೈಲ್ವೆ ನಿಲ್ದಾಣಕ್ಕೆ ಹೋಗಲು ಮತ್ತು ಬರಲು ಇರುವ ಪ್ರಮುಖ ರಸ್ತೆ. ಹಾಗಾಗಿಯೇ ಇದಕ್ಕೆ ಸ್ಟೇಷನ್ ರಸ್ತೆ ಎಂದು ಕರೆಯಲಾಗುತ್ತಿದೆ. ರೈಲು ಪ್ರಯಾಣಿಕರು ಮನೆಯಿಂದ ಎಷ್ಟೇ ಬೇಗ ಹೊರಟರೂ ಈ ರಸ್ತೆಯಲ್ಲಿ ಎದ್ದು ಬಿದ್ದು ಸಾಗಿ ನಿಲ್ದಾಣ ತಲುಪುವಷ್ಟರಲ್ಲಿ ಸುಸ್ತಾಗಿರುತ್ತಾರೆ. ಅಯ್ಯೊ ಬೇರೆ ರಸ್ತೆ ಇಲ್ಲವೇ? ಇದ್ಯಾವಾಗ ದುರಸ್ತಿ ಆಗುತ್ತದೆ ಎಂದು ಜನರು ಗೋಳಾಡುತ್ತಾರೆ.

ರೈಲು ಇಳಿದು ಮನೆಗೆ ಅಥವಾ ತಾವು ತಲುಪಬೇಕಾದ ಸ್ಥಳಕ್ಕೆ ಹೋಗಬೇಕಾದವರದ್ದೂ ಇದೇ ಸಮಸ್ಯೆ. ಆದರೆ, ಇವರ ಸಮಸ್ಯೆ, ಗೋಳಾಟವನ್ನು ಕಣ್ತೆರೆದು ನೋಡುವವರಿಲ್ಲ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಚಿಕ್ಕ ಗುಂಡಿಗಳು ದೊಡ್ಡದಾಗುತ್ತಿವೆ. ಈ ರಸ್ತೆ ಜೆಲ್ಲಿ, ಡಾಂಬರು ಕಾಣುವುದು ಯಾವಾಗ ಎಂದು ಜನರು ಕಾದು ನೋಡುತ್ತಿದ್ದಾರೆ.

ADVERTISEMENT

ಇದು ವಾಹನ ಸವಾರರ ಸಮಸ್ಯೆಯಾದರೆ ರಸ್ತೆ ಅಕ್ಕ ಪಕ್ಕ ಅದರಲ್ಲೂ ವಿದ್ಯಾನಿಕೇತನ ಶಾಲೆಯಿಂದ ಹಿಂದುಳಿದ ವರ್ಗ ವಿದ್ಯಾರ್ಥಿನಿಲಯದ ಹತ್ತಿರದ ಮೇಲ್ಸೇತುವೆ( ಫ್ಲೈಓವರ್) ವರೆಗಿನ ನಿವಾಸಿಗಳಿಗೆ ಕಾಡುತ್ತಿರುವುದು ಒಳಚರಂಡಿ, ಚರಂಡಿ ಸಮಸ್ಯೆ. ಎಲ್ಲಕ್ಕೂ ವಿಚಿತ್ರವೆಂದರೆ ಇಲ್ಲಿ ಒಳಚರಂಡಿಯಿಂದ ಚರಂಡಿಗೆ ಕೊಳಕು ನೀರು ಹರಿಯುತ್ತದೆ!

ರಸ್ತೆ ಪಕ್ಕದ ಚರಂಡಿಗಳು ಮಣ್ಣಿನಿಂದ ಹೂತು ಹೋಗಿವೆ. ಕೆಲವು ಕಡೆಗಳಲ್ಲಿ ಚರಂಡಿ ನೆಲಕ್ಕೆ ಸಮಾನವಾಗಿದೆ. ಕೊಳಚೆ ನೀರು ಚರಂಡಿಯಲ್ಲಿ ಹರಿದು ಸಾಗುತ್ತಿಲ್ಲ. ಚರಂಡಿಯಲ್ಲೇ ಕೊಳಚೆ ನೀರು ನಿಂತಿದೆ. ಇಲ್ಲಿನ ನಿವಾಸಿಗಳು ಅನಾರೋಗ್ಯ ಭೀತಿ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ನಡುರಸ್ತೆಯಲ್ಲೇ ಒಳಚರಂಡಿ ಮ್ಯಾನ್‌ ಹೋಲ್‌ಗಳು ತುಂಬಿ ಕೊಳಚೆ ನೀರು ಹರಿಯುತ್ತಿದೆ. ಕೆಲವು ಕಡೆ ಮ್ಯಾನ್‌ ಹೋಲ್‌ಗಳನ್ನು ರಸ್ತೆಯಿಂದ 3 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.

ಮಳೆ ಬಂದರೆ ಚರಂಡಿ, ಒಳಚರಂಡಿ ನೀರು ಅಕ್ಕಪಕ್ಕದ ಮನೆ, ಅಂಗಡಿ, ವಸತಿ ನಿಲಯಗಳ ಆವರಣಕ್ಕೆ ನುಗ್ಗುತ್ತದೆ. ಒಂದು ದಿನ ಮಳೆ ಬಂದರೆ ವಾರಾನುಗಟ್ಟಲೆ ದುರ್ನಾತ ಬೀರುತ್ತದೆ. ಮಹಾನಗರ ಪಾಲಿಕೆ ಕಣ್ತೆರೆದೂ ಇತ್ತ ನೋಡಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.